ಉ.ಕ.ದಲ್ಲಿ ಮಳೆಯಬ್ಬರ: ಜನಜೀವನ ಅಸ್ತವ್ಯಸ್ತ
ಹುಬ್ಬಳ್ಳಿ, ಜು ೨೫: ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಮಳೆಯಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಪಶ್ಚಿಮಘಟ್ಟ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನದಿ ಪಾತ್ರದ ಗ್ರಾಮದ ಜನರಿಗೆ ಆತಂಕ ಎದುರಾಗಿದೆ.
ದೂಧ್‌ಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಾಂಡೇಯ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ, ಕುಡಚಿ, ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಇಂದು ಮತ್ತು ನಾಳೆ (ಜು.೨೫,೨೬) ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಧಾರವಾಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವುದರಿಂದ ಇಂದು ಮತ್ತು ನಾಳೆ ಜಿಲ್ಲೆಯ ಎಲ್ಲ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪೌಢಶಾಲೆ ಮತ್ತು ಪದವಿಪೂರ್ವ ಕಾಲೆಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶಿಸಿದ್ದಾರೆ.
ಹಾವೇರಿ ಜಿಲ್ಲೆಯಾದ್ಯಂತ ಕಳೆದ ಹತ್ತು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದಿವೆ. ಜಿಲ್ಲೆಯ ಒಟ್ಟು ೧೨ ಸೇತುವೆಗಳು ಮುಳುಗಡೆಯಾಗಿದ್ದು, ನದಿ ಪಾತ್ರದ ಜನರಿಗೆ ದೈನಂದಿನ ಕೆಲಸಕಾರ್ಯಗಳಿಗೆ ಅಡಚಣೆ ಉಂಟಾಗಿದೆ.