ರಾಜ್ಯದಲ್ಲಿ ಮಳೆಯಬ್ಬರ: ಅಪಾರ ಆಸ್ತಿಪಾಸ್ತಿ ನಷ್ಟ
ಕಾರವಾರ,ಜು.೨೪- ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ, ಮಳೆರಾಯನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ. ಉತ್ತರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ, ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ವಾಡಿಕೆಗಿಂತ ಶೇ.೩೪ರಷ್ಟು ಹೆಚ್ಚು ಮಳೆಯಾದ ಪರಿಣಾಮ, ಒಂದೂವರೆ ತಿಂಗಳೊಳಗೆ ಜಿಲ್ಲೆಯಲ್ಲಿ ಹಲವು ಸೌಕರ್ಯಗಳು ಹಾಳಾಗಿದ್ದು, ಸುಮಾರು ೬೧.೪೫ ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವಾಗಿದೆ.
ಜೂನ್ ಆರಂಭದಿಂದ ಜುಲೈ ಮಧ್ಯದವರೆಗೆ ಜಿಲ್ಲೆಯಲ್ಲಿ ಸರಾಸರಿ ಮಳೆ ೧೩೩.೯ ಸೆಂ.ಮೀ. ಈ ಬಾರಿ ೧,೭೯.೭ ಸೆಂ.ಮೀ ಮಳೆಯಾಗಿದೆ. ಈ ಮಳೆ ಭೂಕುಸಿತ, ಪ್ರವಾಹ ಸೇರಿದಂತೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ.
ಜೂನ್ ತಿಂಗಳಲ್ಲಿ ಸುರಿದ ಮಳೆಗೆ ಹೆಚ್ಚಿನ ಹಾನಿಯಾಗದಿದ್ದರೂ ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ವಿವಿಧೆಡೆ ಹಾನಿಯುಂಟಾಗಿದೆ. ಗಂಗಾವಳಿ, ಅಘನಾಶಿನಿ ಮತ್ತು ಗುಂಡಬಾಳ ನದಿ ಪ್ರವಾಹದಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ೧೯ ಆರೈಕೆ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮುಂದುವರಿದ ಭೂಕುಸಿತ: ೯ ಸಾವು
ಜಿಲ್ಲೆಯಲ್ಲಿ ಮಳೆಯ ನಂತರ ಭೂಕುಸಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರವಾರ ಬಳಿ ಗುಡ್ಡ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ದೇವರಬಾವಿ ಹೊನ್ನಾವರದ ಮಂಡ್ರಾಳಿ ಶಿರಸಿ ಕರ್ನಲ್ ಹಿಲ್ ಖರ್ವಾ ಭಾಸ್ಕೇರಿಯಲ್ಲಿ ರಾಗಿಹೊಸಳ್ಳಿ ಸಂಪಖಂಡ ಮೊಸಳೆಗುಂಡಿ ಕುಮಟಾ ಉಳ್ಳೂರು ಮಠ ಬರ್ಗಿ ಯಾನ ಗೋಕರ್ಣ ಸೇರಿದಂತೆ ಹಲವೆಡೆ ಗುಡ್ಡ ಕುಸಿದಿರುವ ಘಟನೆಗಳು ನಡೆದಿವೆ.
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವು ಹಾನಿಗೊಳಗಾಗಿದೆ, ಮಳೆಯಿಂದಾಗಿ ಸುಮಾರು ೪೯೯ ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. ಹೊನ್ನಾವರದ ಘಟ್ಟ ಹಾಗೂ ಗುಂಡಬಾಳ ನದಿಯ ದಡದಲ್ಲಿರುವ ಅಡಿಕೆ ತೋಟಗಳಿಗೆ ಹಾನಿಯಾಗಿದೆ.ಗಾಳಿ ಮಳೆಗೆ ಐದು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ೫೦೦ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ೧೬೯ ಕಿ.ಮೀ ಉದ್ದದ ವಿದ್ಯುತ್ ಲೈನ್ ಕೂಡ ಹಾನಿಯಾಗಿದ್ದು, ಹೆಸ್ಕಾಂನ ಶಿರಸಿ ವೃತ್ತದಲ್ಲಿ ? ೧೦ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
೨೯೦ ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆ, ಶೇ.೪೯ ಸೇತುವೆ ಹಾಗೂ ಬದಿ ಚರಂಡಿ, ಶಾಲೆ, ಅಂಗನವಾಡಿ, ಸರಕಾರಿ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಕಳೆದ ಒಂದು ತಿಂಗಳಿನಿಂದ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.