ಕಲಾಪ ನುಂಗಿದ ಮುಡಾ
(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರಿನ ಮುಡಾ ಪ್ರಕರಣದ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಿಜೆಪಿ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಬೆಂಗಳೂರು, ಜು. ೨೫- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿರುವ ಹಗರಣ ಕುರಿತು ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸಿದ್ದ ಅಹೋರಾತ್ರಿ ಧರಣಿಯನ್ನು ಇಂದು ಮುಂದುವರೆಸಿದ್ದರಿಂದ ವಿಧಾನಸಭೆಯಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಸದನವನ್ನು ೨ ಬಾರಿ ಮುಂದೂಡುವಂತಾಯಿತು.ನಿನ್ನೆ ಸಂಜೆಯಿಂದಲೇ ಪ್ರತಿಪಕ್ಷಗಳು ಸದನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದು, ಇಡೀ ರಾತ್ರಿ ಸದನದಲ್ಲೇ ಮಲಗಿ ಪ್ರತಿಭಟಿಸಿದ್ದರು. ಇಂದು ಬೆಳಿಗ್ಗೆ ಸಹ ಪ್ರತಿಪಕ್ಷಗಳು ಧರಣಿಯನ್ನು ಮುಂದುವರೆಸಿದ್ದರಿಂದ ಸದನದಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಸದನವನ್ನು ಎರಡು ಬಾರಿ ಮುಂದೂಡಲಾಯಿತು.ಇಂದು ಸದನ ಬೆಳಿಗ್ಗೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಧರಣಿ ಮುಂದುವರೆಸಿ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದವು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.ಮತ್ತೆ ಸದನ ಅರ್ಧ ಗಂಟೆಯ ನಂತರ ಸಮಾವೇಶಗೊಂಡಾಗ ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸದೆ ಮುಡಾ ಚರ್ಚೆಗೆ ಆಗ್ರಹಿಸಿ ನಿನ್ನೆಯಿಂದ ನಡೆಸಿದ್ದ ಧರಣಿಯನ್ನು ಮುಂದುವರೆಸಿದರು.ಧರಣಿ ವಾಪಸ್ ಪಡೆಯಿರಿ, ವಿಧೇಯಕಗಳ ಮಂಡನೆ ಇದೆ, ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂಬ ಸಭಾಧ್ಯಕ್ಷರ ಮಾತಿಗೂ ಪ್ರತಿಪಕ್ಷಗಳ ಸದಸ್ಯರು ಕಿವಿಗೊಡದೆ ಧರಣಿ ನಡೆಸಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಜತೆಗೆ ಮುಡಾ ಹಗರಣದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.ಈ ಗದ್ದಲದಲ್ಲಿಯೇ ಸಭಾಧ್ಯಕ್ಷರು ಕೆಲ ವಿಧೇಯಕಗಳ ಮಂಡನೆ, ಅಂಗೀಕಾರ ಕಲಾಪ ನಡೆಸಿದರು.
ಹಾಗೆಯೇ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ವಿರೋಧಿಸುವ, ನೀಟ್ ಪರೀಕ್ಷೆಯನ್ನು ರದ್ದು ಮಾಡುವ, ಒಂದು ದೇಶ ಒಂದು ಚುನಾವಣೆ ವಿರೋಧಿಸುವ ಹಾಗೂ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟು ಜನಾಂಗದವರನ್ನು ಅರಣ್ಯ ವಾಸಿಗಳೆಂದು ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯಗಳನ್ನು ವಿಪಕ್ಷಗಳ ವಿರೋಧದ ನಡುವೆಯೇ ಸರ್ವಾನುಮತದಿಂದ ಅಂಗೀಕರಿಸುವ ಕಲಾಪವನ್ನು ನಡೆಸಿ ನಂತರ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ವಿಪಕ್ಷಗಳ ಧರಣಿ, ಗದ್ದಲದಿಂದ ಇಂದು ಸಹ ಸುಗಮ ಕಲಾಪಗಳು ಸಾಧ್ಯವಾಗಲಿಲ್ಲ. ವಿಪಕ್ಷಗಳ ಧರಣಿ ನಡುವೆಯೇ ವಿಧೇಯಕ ಮಂಡನೆ, ನಿರ್ಣಯ ಅಂಗೀಕಾರ ಕಲಾಪಗಳು ನಡೆದವು.ಇಂದು ಬೆಳಿಗ್ಗೆ ಸದನ ೧೦.೩೦ಕ್ಕೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ- ಜೆಡಿಎಸ್‌ನ ಎಲ್ಲ ಸದಸ್ಯರು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ರವರ ಪೀಠದ ಮುಂದಿನ ಬಾವಿಗೆ ಧಾವಿಸಿ ಧರಣಿ ಮುಂದುವರಿಸಿದ್ದರು.ಈ ಹಂತದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಭಾಧ್ಯಕ್ಷರೇ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ, ನೀವು ನಿನ್ನೆ ಚರ್ಚೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಇವತ್ತಾದರೂ ನಿಮ್ಮ ತೀರ್ಮಾನವನ್ನು ಬದಲಿಸಿ ಚರ್ಚೆಗೆ ಅವಕಾಶ ಕೊಡಿ. ನಿನ್ನೆ ನೀವು ಒತ್ತಡದಲ್ಲಿದ್ದೀರಿ ಎಂದು ಕಾಣುತ್ತದೆ. ಇಂದು ಶಾಂತ ಮನಸ್ಥಿತಿಯಲ್ಲಿದ್ದೀರಿ, ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.ಪ್ರತಿಪಕ್ಷ ನಾಯಕರ ಮಾತಿಗೆ ಹಸನ್ಮುಖರಾದ ಸಭಾಧ್ಯಕ್ಷರು ನೀವು ಧರಣಿ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.ಆಗ ಬಿಜೆಪಿಯ ಸುನೀಲ್‌ಕುಮಾರ್ ಅವರು ಸಭಾಧ್ಯಕ್ಷರೇ ಮುಡಾ ಹಗರಣ ದೊಡ್ಡ ಹಗರಣ. ಇದರ ಚರ್ಚೆಗೆ ಅವಕಾಶ ಕೊಡಬೇಕು. ಮುಖ್ಯಮಂತ್ರಿಗಳ ಮನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಉತ್ತರ ಕೊಡದೆ ಓಡುತ್ತಿದೆ. ನಿಮ್ಮ ಪೀಠವನ್ನು ಆಡಳಿತ ಪಕ್ಷದವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೀವು ಅದಕ್ಕೆ ಬಲಿಯಾಗಬೇಡಿ, ಹಗರಣದ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.ಆಗ ಸಚಿವ ಹೆಚ್.ಕೆ. ಪಾಟೀಲ್ ಅವರು ಎದ್ದುನಿಂತು ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆದಿದೆ. ನ್ಯಾಯಾಂಗ ತನಿಖೆ ನಡೆದಿರುವಾಗ ಸದನದಲ್ಲಿ ಚರ್ಚೆ ನಡೆಸುವುದು ನಿಯಮ ಬಾಹಿರ. ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು.ಗದ್ದಲದಲ್ಲೇ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಅಶೋಕ್, ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರ, ಚರ್ಚೆಗೆ ಅವಕಾಶ ನೀಡಲೇಬೇಕು. ೩-೪ ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ. ಒಬ್ಬರಿಗೆ ೧೪ ನಿವೇಶನ ನೀಡಲು ನಿಯಮದಲ್ಲಿ ಅವಕಾಶ ಇದೆಯೇ, ಇಡೀ ರಾಜ್ಯದ ಜನತೆ ಈ ಬಗ್ಗೆ ಮಾತನಾಡುತ್ತಿದ್ದಾರೆ, ಚರ್ಚೆಗೆ ಅವಕಾಶ ಕೊಡಿ ಎಂದರು.ಆಗ ಸಭಾಧ್ಯಕ್ಷರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದ್ದರು.ಮತ್ತೆ ಸದನ ಅರ್ಧ ಗಂಟೆಯ ನಂತರ ಸಮಾವೇಶಗೊಂಡಾಗಲೂ ಪ್ರತಿಪಕ್ಷಗಳ ಸದಸ್ಯರು ತಮ್ಮ ಪಟ್ಟನ್ನು ಸಡಿಲಿಸದೇ ಇದ್ದುದರಿಂದ ಸಭಾಧ್ಯಕ್ಷರು ಕೆಲ ವಿಧೇಯಕ ಮಂಡನೆ, ಅಂಗೀಕಾರ ಕಲಾಪ ನಡೆಸಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.