ಶಿಶು ಮರಣ ಪ್ರಮಾಣ: ಬೆಂಗಳೂರು ಸಿಟಿ ಟಾಪರ್! ‘ತಾಯಂದಿರ ಸಾವು’ ಬೆಳಗಾವಿ ಜಿಲ್ಲೆ ನಂ.1
ಮಹೇಶ್‍ಕುಲಕರ್ಣಿ,
ಕಲಬುರಗಿ:ಜು.23:ರಾಜ್ಯಾದ್ಯಂತ ಶಿಶು ಮರಣ ಪ್ರಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಹಾಗೂ ಮೈಸೂರು ದ್ವಿತೀಯ ಸ್ಥಾನ ಹಂಚಿಕೊಂಡಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆ ಟಾಪರ್ ಆಗಿ ಹೊರ ಹೊಮ್ಮಿದೆ. ಮತ್ತೊಂದೆಡೆ, ತಾಯಂದಿರ ಸಾವಿನಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪ್ರಾಪ್ತವಾಗಿದ್ದರೆ, ಕಲಬುರಗಿ ಜಿಲ್ಲೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಆತಂಕ ಮೂಡಿಸಿದೆ.
ತಾಯಂದಿರು ಮತ್ತು ಶಿಶುಗಳ ಮರಣದ ಕುರಿತು ಮಾಹಿತಿ ಹಕ್ಕು ಅಧಿನಿಯಮ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಆರ್.ಸಿ.ಎಚ್ (ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ವಿಭಾಗ) ರಾಜ್ಯಯೋಜನಾ ನಿರ್ದೇಶಕರು ಸ್ಪಷ್ಟ ಮಾಹಿತಿ ನೀಡಿದ್ದು, 2023-24ರಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 833 ಶಿಶುಗಳು ಸಾವನ್ನಪ್ಪಿದ್ದರೆ, ಮೈಸೂರು ಜಿಲ್ಲೆಯಲ್ಲಿ 688, ಹಾಸನ ಜಿಲ್ಲೆಯಾದ್ಯಂತ 483 ಹಾಗೂ ರಾಯಚೂರು ಜಿಲ್ಲೆಯಾದ್ಯಂತ 624 ಶಿಶುಗಳು ಮೃತಪಟ್ಟಿವೆ ಎಂದಿದ್ದಾರೆ.
ಏತನ್ಮಧ್ಯೆ, ಶಿಶುಗಳ ಮರಣ ಪ್ರಮಾಣ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚು ಕಂಡುಬಂದಿದ್ದು, ಬಳ್ಳಾರಿ (524), ಕಲಬುರಗಿ (429), ಕೊಪ್ಪಳ (414), ಬೀದರ್ (290), ಹಾಗೂ ಭೌಗೋಳಿಕವಾಗಿ ಅತ್ಯಂತ ಚಿಕ್ಕದಾಗಿರುವ ಯಾದಗಿರಿ ಜಿಲ್ಲೆಯಲ್ಲಿ 133, ವಿಜಯನಗರ ಜಿಲ್ಲೆಯಲ್ಲಿ 83 ಶಿಶುಗಳು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯಾದ್ಯಂತ 2023-24ರಲ್ಲಿ ತಾಯಂದಿರ ಸಾವಿನ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದ್ದು, ಈ ಜಿಲ್ಲೆಯಲ್ಲಿ ಒಟ್ಟು 44 ತಾಯಂದಿರು ಸಾವನ್ನಪ್ಪಿದ್ದಾರೆ.ಇದೇ ವೇಳೆ, ಕಲಬುರಗಿ ಜಿಲ್ಲೆಯಲ್ಲಿ 39 ತಾಯಂದಿರು ಮೃತಪಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ತಾಯಂದಿರ ಸಾವಿಗೆ ಕಲಬುರಗಿ ಜಿಲ್ಲೆ ಸಾಕ್ಷಿಯಾಗಿದೆ ಎಂದು ಯೋಜನಾ ನಿರ್ದೇಶಕರು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಸಾವಿಗೆ ಹಲವು ಕಾರಣ
ಗರ್ಭಾವಸ್ಥೆಯ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ತೀರಾ ಸಾಮಾನ್ಯ ಎನ್ನುವಂತಿದ್ದರೂ, ಈ ಸಮಸ್ಯೆ ಗ್ರಾಮೀಣ ಭಾಗದ ಗರ್ಭಿಣಿಯರಲ್ಲಿ ಹೆಚ್ಚು ಕಾಡುತ್ತಿರುತ್ತದೆ.ಮೇಲಾಗಿ, ಪ್ರಸವಪೂರ್ವದ ಆರಂಭಿಕ ದಿನದಿಂದಲೇ ಕ್ರಮಬದ್ಧವಾಗಿ ಆರೋಗ್ಯ ತಪಾಸಣೆಗೆ ಒಳಗಾಗದೆ ನಿರ್ಲಕ್ಷ್ಯ ತೋರಿದರೆ ಹೆರಿಗೆಯ ಸಂದರ್ಭದಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕಲಬುರಗಿ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳುತ್ತಾರೆ.
ಮೇಲಾಗಿ, ಪ್ರಸವಪೂರ್ವ ಅವಧಿಯಲ್ಲಿ ಕಾಡುವ ಎಕ್ಲಾಂಪ್ಸಿಯಾ (ಗರ್ಭಾವಸ್ಥೆಯಲ್ಲಿಕಾಡುವ ಮೂರ್ಛೆರೋಗ) ಕಾರಣದಿಂದಾಗಿ ಮೇಲಿಂದ ಮೇಲೆ ಮೂರ್ಛೆ ಬರುವುದರಿಂದ ಮೆದುಳು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಅಲ್ಲದೆ, ಪ್ರಸವಪೂರ್ವ ಅವಧಿಯ ರಕ್ತದೊತ್ತಡ ಸಮಸ್ಯೆ, ಹೆರಿಗೆಯ ವೇಳೆ ಸಂಭವಿಸುವ ಅಧಿಕ ರಕ್ತಸ್ರಾವದಿಂದಲೂ ಮಹಿಳೆ ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಅವರು ವಿವರಿಸುತ್ತಾರೆ.
ಆರೋಗ್ಯದ ಹಕ್ಕು ದೇಶಾದ್ಯಂತ ಜಾರಿಯಾಗಬೇಕು.ಅಂದಾಗ ಮಾತ್ರ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣದ ಮೇಲೆ ಕಡಿವಾಣ ಹಾಕಲು ಸಾಧ್ಯವಿದೆ.
– ವಿಠ್ಠಲ ಚಿಕಣಿ
ನಿರ್ದೇಶಕರು, ಸಂಸ್ಕಾರ ಪ್ರತಿಷ್ಠಾನ
ಕಲಬುರಗಿ
ಗರ್ಭಿಣಿಯರನ್ನುಕಾಡುವ ರಕ್ತಹೀನತೆ ಹಾಗೂ ಎಕ್ಲಾಂಪ್ಸಿಯಾ ಸಮಸ್ಯೆಗೂ ಶಿಶುಗಳ ಸಾವಿಗೂ ನೇರ ಸಂಬಂಧವಿದೆ.ಜೊತೆಗೆ, ಅವಧಿ ಪೂರ್ವ ಹೆರಿಗೆ, ಬಾಣಂತನದ ವೇಳೆ ಅತ್ಯಂತ ಕಡಿಮೆ ತೂಕದ ಶಿಶುಗಳ ಜನನ ಸೇರಿದಂತೆ ಹಲವು ಕಾರಣಗಳಿಂದ ಶಿಶುಗಳು ಹೆರಿಗೆಯ ವೇಳೆ, ಒಮ್ಮೊಮ್ಮೆ ಹೆರಿಗೆಯ ನಂತರ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
– ಡಾ.ಪ್ರಶಾಂತಕುಲಕರ್ಣಿ
ಮಕ್ಕಳ ತಜ್ಞರು
ಬಾಲ್ಯ ವಿವಾಹ ಸೃಷ್ಟಿಸಿದ ಆತಂಕ
ಬದಲಾದ ಜೀವನ ಶೈಲಿಯ ಕಾರಣಕ್ಕಾಗಿ ಬಾಲಕಿಯರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಋತುಮತಿ ಆಗುತ್ತಿದ್ದಾರೆ.ಇದರಿಂದಾಗಿ, ಗ್ರಾಮೀಣ ಭಾಗದಲ್ಲಿ ಸಹಜವಾಗಿಯೇ ಬಾಲ್ಯವಿವಾಹ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವ ಬಾಲಕಿಯರು ಸಂಪೂರ್ಣ ವಿಕಸಿತಗೊಳ್ಳದ ಗರ್ಭಾಶಯ ಸಮಸ್ಯೆ ಹಾಗೂ ದಿಢೀರನೆ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಹೆರಿಗೆಯ ವೇಳೆ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.ಈ ನಿಟ್ಟಿನಲಿ ್ಲಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ವಿಠ್ಠಲ ಚಿಕಣಿ ವಾಸ್ತವ ಬಿಚ್ಚಿಡುತ್ತಾರೆ.