ಸರ್ಕಾರಿ ಜಮೀನು ರಕ್ಷಣೆಗೆ ಲ್ಯಾಂಡ್ ಬೀಟ್ ಯೋಜನೆ
ಬೆಂಗಳೂರು, ಜು. ೨೨- ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಲ್ಯಾಂಡ್ ಬೀಟ್ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಹೇಳಿದರು
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ನೇಮರಾಜನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಜಮೀನುಗಳ ಒತ್ತುವರಿ ತಡೆಯಲು ರಾಜ್ಯದ ಎಲ್ಲೆಲ್ಲಿ ಎಷ್ಟೇಷ್ಟು ಸರ್ಕಾರಿ ಜಾಗವಿದೆ ಎಂಬುದನ್ನು ಡಿಜಟಲೀಕರಣ ಮಾಡಿ ಒಂದು ಆಪ್ ಮಾಡಿದ್ದೇವೆ. ಇಲ್ಲೇ ಕುಳಿತುಕೊಂಡು ಹತ್ತು ಸೆಕೆಂಡುಗಳಲ್ಲಿ ಯಾವ ಗ್ರಾಮಗದಲ್ಲಿ, ಯಾವ ತಾಲ್ಲೂಕಿನಲ್ಲಿ, ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಸರ್ಕಾರಿ ಜಮೀನು ಇದೆ ಎಂಬುದನ್ನು ಹೇಳಲು ಸಾಧ್ಯವಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಟ್ಟಾರೆ ೧೪.೫ ಲಕ್ಷ ಸರ್ಕಾರಿ ಜಮೀನಿದ್ದು, ಈ ಜಮೀನಿನ ಮಾಹಿತಿಯ ಆಪ್‌ನ್ನು ಸಿದ್ಧ ಮಾಡಿದ್ದೇವೆ. ಹಾಗೆಯೇ ಜಮೀನಿನ ಆಕಾರದ ಮಾಹಿತಿಯೂ ಇದರಲ್ಲಿದೆ ಎಂದರು.
ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಲ್ಯಾಂಡ್ ಬೀಟ್ (ಜಮೀನು ಗಸ್ತು) ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ. ಈ ಲ್ಯಾಂಡ್ ಬೀಟ್ ಯೋಜನೆಯಲ್ಲಿ ಪ್ರತಿ ಗ್ರಾಮ ಲೆಕ್ಕಿಗರು ಆಯಾ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನುಗಳಲ್ಲಿ ನಮ್ಮ ಆಕಾರ ಪ್ರಕಾರ ತೆರಳಬೇಕು. ಹಾಗೆ ತೆರಳುವಾಗ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಆ ಬಗ್ಗೆ ತಹಶೀಲ್ದಾರ್ ರವರಿಗೆ ಮಾಹಿತಿ ನೀಡಬೇಕು. ತಹಶೀಲ್ದಾರ್ ರವರು ಆ ಒತ್ತುವರಿಯನ್ನು ತೆರವುಗೊಳಿಸಬೇಕು. ಇದು ಈ ಲ್ಯಾಂಡ್ ಬೀಟ್‌ನ ಯೋಜನೆಯ ಉದ್ದೇಶವಾಗಿದ್ದು, ಇದರಿಂದ ಸರ್ಕಾರಿ ಜಮೀನಿನ ರಕ್ಷಣೆ ಮಾಡುವ ಜತೆಗೆ ಒತ್ತುವರಿಯನ್ನು ತೆರವುಗೊಳಿಸಲು ಸಾಧ್ಯವಾಗುತ್ತಿದೆ ಎಂದರು.
ಸದಸ್ಯರಾದ ನೇಮರಾಜ್ ನಾಯಕ್ ಅವರು ಸ್ಮಶಾನ ಜಾಗಗಳಿಗೆ ಹದ್ದುಬಸ್ತು ಇರದ ಕಾರಣ ಒತ್ತುವರಿಯಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದಿದ್ದಾರೆ. ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸ್ಮಶಾನದ ಹದ್ದುಬಸ್ತಿನಲ್ಲಿ ಒತ್ತುವರಿ ತೆರವುಗೊಳಿಸಬೇಕು ಹಾಗೆಯೇ ಕೆರೆ ಒತ್ತುವರಿಗೂ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ಸಂದರ್ಭದಲ್ಲಿ ಈ ಎರಡಕ್ಕೆ ಆದ್ಯತೆ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.