ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ಇನ್ನೂ 5 ದಿನ ಇಡಿ ಕಸ್ಟಡಿಗೆ
ಬೆಂಗಳೂರು, ಜು.18- ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇನ್ನೂ ಐದು ದಿನಗಳ ಜಾರಿ ನಿರ್ದೇಶನಾಲಯ ಕಸ್ಟಡಿಗೆ ಗುರುವಾರ ಒಪ್ಪಿಸಿಲಾಗಿದೆ.
ನಾಗೇಂದ್ರ ಅವರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರುಪಡಿಸ ಲಾಯಿತು.
ನಾಗೇಂದ್ರ ಅವರನ್ನು ತನಿಖೆಗೆ ಒಳಪಡಿಸಬೇಕಾಗಿದೆ.‌ಈ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಒಪ್ಪಿಸಬೇಕೆಂದು ಇಡಿ ಪರ ವಕೀಲುರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಗುರುವಾರ ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದರು.
ನಾಗೇಂದ್ರ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ‌ ಶ್ಯಾಮ ಸುಂದರ್, ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಶೋಧ ಮುಗಿದಿದೆ. ಸೀಜಿಂಗ್ ಕಾರ್ಯ ಮುಗಿದಿದೆ. ಆರೋಪಿಯ ವಿಚಾರಣೆಯೂ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಇಡಿ ಅಧಿಕಾರಿಗಳು ಪೊಲೀಸರಲ್ಲ. ಅವರನ್ನು ಕಸ್ಟಡಿಗೆ ಪಡೆದ ಉದ್ದೇಶ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡುವುದೇನಿಲ್ಲ ಎಂದು ಪ್ರಶ್ನಿಸಿ,ಈ ಕುರಿತು
ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿದರು.
ಇಡಿ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ,ನಾಗೇಂದ್ರ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಅವರನ್ನು ವಿಚಾರಣೆ ನಡೆಸುವ ಅಗತ್ಯವಿದೆ.ಪಿಎಂಎಲ್‌ಎ ಸೆಕ್ಷನ್ 65 ಅಡಿ ಆರೋಪಿ ಹೇಳಿಕೆ ದಾಖಲಿಸಲು ಅಧಿಕಾರ ಇದೆ ವಾದಿಸಿದರು.
ಈ ವೇಳೆ ಶ್ಯಾಂ ಸುಂದರ್ ಅವರು, ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿ, ಇಡಿ ಅಧಿಕಾರಿಗಳು ಅಲ್ಲಿಯೇ ವಿಚಾರಣೆ ಮಾಡಬಹುದು. ಇಲ್ಲಿದ್ದರೇ ಅವರ ಮೇಲೆ ಒತ್ತಡ ಹೇರಲಾಗುತ್ತೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ, ಈಗಾಗಲೇ ಹೇಳಿಕೆ ದಾಖಲು ಮಾಡಿ ಆಗಿದೆ ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಮತ್ತೆ ನಾಗೇಂದ್ರ ಅವರನ್ನು 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.