ಪುರಿ ಜಗನ್ನಾಥ ದೇಗುಲ ಪ್ರವೇಶಕ್ಕೆ ನಿಷೇಧ
ಪುರಿ.ಜು.೧೮- ರತ್ನ ಭಂಡಾರದ (ಖಜಾನೆ) ಒಳಗಿನ ಕೊಠಡಿಯಿಂದ ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ‘ಸ್ಟ್ರಾಂಗ್ ರೂಂ’ಗೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ದೇವಸ್ಥಾನದ ಅಧಿಕಾರಿಗಳು ನಿಷೇಧಿಸಿದ್ದಾರೆ. ಇಂದು (ಗುರುವಾರ) ಯಾವುದೇ ಭಕ್ತರಿಗೆ ಪುರಿ ಜಗನ್ನಾಥ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
ಪುರಿ ಜಗನ್ನಾಥ ದೇವಾಲಯದ ನೆಲಮಾಳಿಗೆಯಲ್ಲಿರುವ ರತ್ನ ಭಂಡಾರವು ಹೊರ ಮತ್ತು ಒಳ ಕೋಣೆಯನ್ನು ಹೊಂದಿದೆ. ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಮುಖ್ಯಸ್ಥ ಅರವಿಂದ ಪಾಧಿ ಅವರು ರತ್ನ ಭಂಡಾರದ ಒಳಗಿನ ಕೋಣೆಯನ್ನು ಮತ್ತೆ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ನಾವು ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದೇವೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ೮ ಗಂಟೆಯ ನಂತರ ದೇವಸ್ಥಾನಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ.
ಇಂದು ಬೆಳಗ್ಗೆ ೮ ಗಂಟೆಯ ನಂತರ ಅಧಿಕೃತ ವ್ಯಕ್ತಿಗಳು ಮತ್ತು ಸೇವಕರಿಗೆ ಮಾತ್ರ ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು ಎಂದು ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ. ಇಂದು ಈ ದೇವಾಲಯದ ಸಿಂಗ್ ದ್ವಾರ (ಮುಂಭಾಗದ ಬಾಗಿಲು) ಮಾತ್ರ ತೆರೆಯಲಾಯಿತು. ಉಳಿದ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟವು. ಅಲ್ಲಿರುವ ಅಮೂಲ್ಯ ವಸ್ತುಗಳನ್ನು ಸ್ಟ್ರಾಂಗ್ ರೂಮ್ಗೆ ವರ್ಗಾಯಿಸಲಾಗುತ್ತದೆ.
ಒಡಿಶಾ ಸರ್ಕಾರ ಹೊರಡಿಸಿದ SಔPಗಳನ್ನು ಅನುಸರಿಸಿ ಪುರಿ ಜಗನ್ನಾಥ ದೇವಾಲಯದ ’ರತ್ನ ಭಂಡಾರ’ದ ಬಾಗಿಲನ್ನು ತೆರೆಯಲಾಯಿತು. ಜುಲೈ ೧೩ರಂದು ಒಡಿಶಾ ಸರ್ಕಾರವು ಅಲ್ಲಿ ಸಂಗ್ರಹವಾಗಿರುವ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸ್ಥಳಾಂತರಿಸಲು ರತ್ನ ಭಂಡಾರವನ್ನು ತೆರೆಯಲು ಅನುಮೋದನೆ ನೀಡಿತು.
ಪುರಿ ಜಗನ್ನಾಥ ದೇವಾಲಯದ ಪವಿತ್ರವಾದ ‘ರತ್ನ ಭಂಡಾರ’ವನ್ನು ಇತಿಹಾಸದಲ್ಲಿ ಎರಡು ಬಾರಿ ತೆರೆಯಲಾಯಿತು. ಮೊದಲು ೧೯೭೮ರಲ್ಲಿ ಮೇ ೧೩ರಿಂದ ಜುಲೈ ೨೩ರವರೆಗೆ ಮತ್ತು ೧೯೮೫ರ ಜುಲೈ ೧೪ರಂದು ತೆರೆಯಲಾಗಿತ್ತು.