ಡೋಲು ಬಾರಿಸದಿದ್ದಕ್ಕೆ ಎಸ್‌ಸಿ ಸಮುದಾಯಕ್ಕೆ ಬಹಿಷ್ಕಾರ
ಗೋಪೇಶ್ವರ(ಉತ್ತರಾಖಂಡ).ಜು.೧೮-ಅನಾರೋಗ್ಯದಿಂದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ದೇವಾಲಯದಲ್ಲಿ ಡೋಲು ಬಾರಿಸಿಲ್ಲ ಎನ್ನುವ ಕಾರಣಕ್ಕೆ ಇಡೀ ಸಮುದಾಯವನ್ನು ಗ್ರಾಮದಿಂದಲೇ ಬಹಿಷ್ಕರಿಸಿದ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದೆ.
ಭಾರತ ಮತ್ತು ಚೀನಾ ಗಡಿಭಾಗದಲ್ಲಿರುವ ನೀತಿ ಕಣಿವೆ ಪ್ರದೇಶದಲ್ಲಿನ ಸುಭಯ್ ಗ್ರಾಮದ ಪಂಚಾಯಿತಿಯಲ್ಲಿ ಬಹಿಷ್ಕಾರದ ಘೋಷಣೆ ಮಾಡಲಾಗಿದೆ.
ಈ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದಲ್ಲಿದ್ದು ಹಲವಾರು ವರ್ಷಗಳಿಂದ ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮದಲ್ಲಿ ಡೋಲು ಬಾರಿಸುತ್ತಾ ಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪುಷ್ಕರ್ ಲಾಲ್ ಎಂಬುವರಿಗೆ ಇತ್ತೀಚೆಗೆ ನಡೆದ ದೇವಸ್ಥಾನದ ಕಾರ್ಯಕ್ರಮವೊಂದರಲ್ಲಿ ಡೋಲು ಬಾರಿಸಲು ಸಾಧ್ಯವಾಗಲಿಲ್ಲ. ಈ ಕಾರಣವನ್ನಿಟ್ಟುಕೊಂಡು ಸ್ಥಳೀಯ ಪಂಚಾಯಿತಿಯು ಈ ಸಮುದಾಯದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದೆ.
ಪಂಚಾಯಿತಿಯ ಸದಸ್ಯರು ಬಹಿಷ್ಕಾರದ ಘೋಷಣೆ ಮಾಡುತ್ತಿರುವುದು ಹಾಗೂ ಆದೇಶ ಪಾಲಿಸದಿದ್ದರೆ ಇಂತಹ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಸ್‌ಸಿ ಸಮುದಾಯವನ್ನು ಬೆದರಿಸುತ್ತಿರುವುದು ವಿಡಿಯೊವೊಂದರಲ್ಲಿ ಸೆರೆಯಾಗಿದೆ.
ಆದೇಶದಲ್ಲಿ ಗ್ರಾಮಕ್ಕೆ ಸೇರಿದ ನೀರು ಮತ್ತು ಅರಣ್ಯ ಸಂಪತ್ತನ್ನು ಬಳಸುವಂತಿಲ್ಲ. ಊರಿನ ಅಂಗಡಿಗಳಲ್ಲಿ ಸಾಮಗ್ರಿ ಖರೀದಿ ಮಾಡುವಂತಿಲ್ಲ. ದೇವಸ್ಥಾನಗಳಿಗೆ ತೆರೆಳುವಂತಿಲ್ಲ ಮತ್ತು ಸಾರ್ವಜನಿಕ ವಾಹನಗಳನ್ನು ಬಳಸುವಂತಿಲ್ಲ ಎಂದು ನಿಬಂಧ ಹೇರಲಾಗಿದೆ.
ಇಲ್ಲಿನ ಜೋಶಿಮಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದೇಶ ಮಾಡಿದ್ದ ರಾಮಕೃಷ್ಣ ಖಂಡ್ವಾಲ್ ಮತ್ತು ಯಶ್ವೀರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ.