ರಾಜ್ಯದ ಐಟಿ ಕಂಪನಿಗಳಿಗೆ ಗಾಳ ನಾರಾ- ಪ್ರಿಯಾಂಕ್ ಜಟಾಪಟಿ
ಅಮರಾವತಿ,ಜು,೧೮-ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ವಿಧೇಯಕದ ವಿಷಯದ ಸದ್ದು ಮಾಡಿರುವ ನಡುವೆಯೇ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ವಿಶಾಖಪಟ್ಟಣ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಐಟಿ ಕಂಪನಿಗಳನ್ನು ವಿಸ್ತರಿಸಿಕೊಳ್ಳಿ ಎಂದು ಉದ್ಯಮದ ಮಂದಿಗೆ ಮನವಿ ಮಾಡಿದ್ದಾರೆ.
ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರ ಆಹ್ವಾನ ಕುರಿತು ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ನಡುವೆ ಜಟಾಪಟಿ ನಡೆದಿದೆ
ನಾರಾ ಲೋಕೇಶ್ ಅವರು ಐಟಿ ಕಂಪನಿ ತೆರೆಯಲು ಮುಂದೆ ಬರುವ ಮಂದಿಗೆ ಆಂದ್ರ ಪ್ರದೇಶ ಸರ್ಕಾರ ಎಲ್ಲಾ ರೀತಿಯ ಸಹಕಾರ ಸೌಲಭ್ಯ ಮತ್ತು ಉತ್ತಮ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ
ಕರ್ನಾಟಕದಲ್ಲಿ ಸಮಸ್ಯೆ ಎದುರಾದರೆ ನಮ್ಮ ರಾಜ್ಯಕ್ಕೆ ಬನ್ನಿ ಎಂದು ಸಾಫ್ಟ್‌ವೇರ್ ಸಂಸ್ಥೆಯಾದ ನಾಸ್ಕಾಮ್‌ಗೆ ಆಹ್ವಾನ ನೀಡಿದ್ದಾರೆ. ಕರ್ನಾಟಕದ ಖಾಸಗಿ ಉದ್ಯೋಗಗಳ ಕೋಟಾ ಸ್ಥಳೀಯರ ಮಸೂದೆಯ ಬಗ್ಗೆ ನಾಸ್ಕಾಮ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕರ್ನಾಟಕ ಸರ್ಕಾರ ಮಸೂದೆಗೆ ಒಪ್ಪಿಗೆ ನೀಡಿದ ನಂತರ, ನಾಸ್ಕಾಮ್ ಪತ್ರದಲ್ಲಿ, “ಸ್ಥಳೀಯ ನುರಿತ ಪ್ರತಿಭೆಗಳು ವಿರಳವಾಗಿರುವುದರಿಂದ ನಿರ್ಬಂಧಗಳು ಕಂಪನಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಬಹುದು” ಆಗ ನಮ್ಮಲ್ಲಿಗೆ ಬನ್ನಿ ಎಂದು ಅವರು ಮನವಿ ಮಾಡಿದ್ಧಾರೆ
೧೧,೦೦೦ ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗೆ ಟೆಕ್ ವಲಯ ಕರ್ನಾಟಕದ ಜಿಡಿಪಿಯ ಶೇಕಡಾ ೨೫ ರಷ್ಟು ಕೊಡುಗೆ ನೀಡುತ್ತದೆ ಮತ್ತು ಒಟ್ಟು ಜಿಸಿಸಿಗಳಲ್ಲಿ ಶೇಕಡಾ ೩೦ ರಷ್ಟು ಕೊಡುಗೆ ನೀಡುತ್ತದೆ ಎಂದು ನಾಸ್ಕಾಮ್ ಹೇಳಿದೆ.
ಪ್ರಿಯಾಂಕ್ ಖರ್ಗೆ ಸ್ಪಷ್ಟನೆ:
ನಾಸ್ಕಾಮ್‌ನ ಕಳವಳಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕಾನೂನು ಪರಿಶೀಲನೆಯಂತಹ ಯಾವುದೇ ಕ್ರಮವನ್ನು ಸರ್ಕಾರ ಮಾಡುವುದಿಲ್ಲ. ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ
ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಜಾಗತಿಕ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವುದು, ಜಾಗತಿಕ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಕರ್ನಾಟಕ ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಿದ ಸಾಫ್ಟ್‌ವೇರ್ ಸಂಸ್ಥೆ ಟ್ವೀಟ್‌ನಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಪಾಲುದಾರಿಕೆ ಮುಂದುವರಿಸಲು ಉತ್ಸುಕರಾಗಿದ್ದೇವೆ ಎಂದು ಪ್ರತಿಪಾದಿಸಿದೆ.
“ನಮ್ಮ ಉದ್ಯಮ ನಾವೀನ್ಯತೆಯ ಮುಂಚೂಣಿಯಲ್ಲಿಡಲು ಜಾಗತಿಕವಾಗಿ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವ ಸಾಮಥ್ರ್ಯವೂ ನಮ್ಮಲ್ಲಿದೆ. ಒಟ್ಟಾಗಿ, ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು” ಎಂದು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ನಾಸ್ಕಾಮ್ ಪ್ರತಿಕ್ರಿಯಿಸಿದೆ.