ಐಇಡಿ ಸ್ಫೋಟ: ಇಬ್ಬರು ಯೋಧರು ಹುತಾತ್ಮ
ರಾಯ್ ಪುರ, ಜು.೧೮- ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ
ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭದ್ರತಾ ಸಿಬ್ಬಂದಿ ಶೋಧ ಕಾರ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಮುಂಜಾನೆ ಈ ಘಟನೆ ನಡೆದಿದೆ ಎಂದು ಬಸ್ತಾರ್ ಪೊಲೀಸರು ತಿಳಿಸಿದ್ದಾರೆ.
“ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ನಡುವಿನ ಗಡಿ ಪ್ರದೇಶದಲ್ಲಿ ದರ್ಭಾ ವಿಭಾಗ, ಪಶ್ಚಿಮ ಬಸ್ತಾರ್ ವಿಭಾಗ ಮತ್ತು ಮಿಲಿಟರಿ ಕಂಪನಿ ನಂ. ೨ ನ ನಕ್ಸಲ್ ಇರುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ, ಈ ಜಿಲ್ಲೆಗಳಿಂದ ಎಸ್‌ಟಿಎಫ್, ಡಿಆರ್‍ಜಿ, ಕೋಬ್ರಾ ಮತ್ತು ಸಿಆರ್‍ಪಿಎಫ್ ತಂಡ ಶೋಧ ಮುಂದುವರಿಸಿದ್ದವು.ಶೋಧ ಕಾರ್ಯ ಮುಗಿಸಿ ವಾಪಸ್ಸಾಗುವ ವೇಳೆ ಈ ಅವಘಢ ನಡೆದಿದೆ
ಮೃತ ಯೋಧರನ್ನು ರಾಯ್‌ಪುರ ನಿವಾಸಿ ಕಾನ್‌ಸ್ಟೆಬಲ್ ಭರತ್ ಸಾಹು ಮತ್ತು ನಾರಾಯಣಪುರ ನಿವಾಸಿ ಕಾನ್‌ಸ್ಟೆಬಲ್ ಸತ್ಯರ್ ಸಿಂಗ್ ಕಾಂಗೆ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಹೆಚ್ಚುವರಿ ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಗಾಯಗೊಂಡ ಎಸ್‌ಟಿಎಫ್ ಜವಾನರಿಗೆ ಸೂಕ್ತ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ
ಮಹತ್ವದ ನಕ್ಸಲ್-ವಿರೋಧಿ ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಮಹಾರಾಷ್ಟ್ರ ಛತ್ತೀಸ್‌ಗಢ ಗಡಿಯಲ್ಲಿರುವ ವಂಡೋಲಿ ಗ್ರಾಮದಲ್ಲಿ ಪ್ರಮುಖ ದಾಳಿ ಆರಂಭಿಸಿದ್ದವು. ಇದರ ಪರಿಣಾಮವಾಗಿ ೧೨ ನಕ್ಸಲರು ಸಾವನ್ನಪ್ಪಿದರು ಮತ್ತು ಗಣನೀಯ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ
ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ಆರಂಭವಾದ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ ಏಳು ಸಿ-೬೦ ನಕ್ಸಲ್ ವಿರೋಧ ಪಡೆ ಭಾಗಿಯಾಗಿತ್ತು