ಡ್ರಗ್ಸ್ ಜಾಲ ಹರಡಲು ಬಿಡಲ್ಲ: ಪರಂ ಪಣ
ಬೆಂಗಳೂರು,ಜು.೧೮-ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದ್ದು,ಯಾವುದೇ ಕಾರಣಕ್ಕೂ ಡ್ರಗ್ಸ್ ಜಾಲ ಹರಡಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರುವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಪೆಡ್ಲರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಕಳೆದ ವರ್ಷ ೨೦೨೩ರಲ್ಲಿ ೨೪೦೯ ಶಾಲಾ-ಕಾಲೇಜುಗಳಲ್ಲಿ ೩.೯೫ ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿತ್ತು. ಪ್ರಸಕ್ತ ವರ್ಷ ಜೂನ್‌ನಲ್ಲಿ ೩,೬೦೦ ಶಾಲಾ-ಕಾಲೇಜುಗಳಲ್ಲಿ ೫.೫೦ ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದೇವೆ. ಯಾವುದೇ ಕಾರಣಕ್ಕು ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗಬಾರದು ಎಂಬುದು ನಮ್ಮ ಉದ್ದೇಶ. ಅವರಿಗೆ ಜಾಗೃತಿ ಮೂಡಿಸಿದರೆ ಡ್ರಗ್ಸ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
೨೦೨೨ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ೬೪೦೬ ಪ್ರಕರಣ ದಾಖಲಿಸಿದ್ದು, ೬೧೬೪ ಆರೋಪಿಗಳನ್ನು ಬಂಧಿಸಲಾಗಿದೆ. ೩೮೮೧ ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಇದರಲ್ಲಿ ೨೩೬೫ ಜನರಿಗೆ ಶಿಕ್ಷೆಯಾಗಿದೆ. ೨೦೨೩ರಲ್ಲಿ ೬೭೬೪ ಪ್ರಕರಣಗಳಲ್ಲಿ ೨೨೮೦ ಬಂಧಿಸಲಾಗಿದೆ. ೪೧೮೭ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ೨೨೮೦ ಆರೋಪಿತರಿಗೆ ಶಿಕ್ಷೆಯಾಗಿದೆ. ಪ್ರಸಕ್ತ ವರ್ಷ ಜುಲೈ ೧೦ರವರೆಗೆ ೧೭೯೧ ಪ್ರಕರಣಗಳಲ್ಲಿ ೧೧೭೯ ಆರೋಪಿಗಳನ್ನು ಬಂಧಿಸಲಾಗಿದೆ. ೮೮೪ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು ೧೮೯ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸುಮಾರು ೧೫೦ ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. ೧೦ ಟನ್ ಗಾಂಜಾ, ೨೫೦ ಕೆಜಿಯಷ್ಟು ಸಿಂಥೆಟಿಕ್ ಡ್ರಗ್ಸ್ ಸುಟ್ಟು ಹಾಕಲಾಗಿದೆ. ಯುವಕರು ಮಾದಕ ವ್ಯಸನದಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ವಿರುದ್ಧವಾಗಿ ನಿರಂತರವಾದ ಹೋರಾಟ ನಡೆಸಲಾಗುತ್ತಿದೆ ಎಂದರು.
ವಿದೇಶದಿಂದ ವಿದ್ಯಾರ್ಥಿ ವೀಸಾದ ಮೇಲೆ ಬಂದು ದಂಧೆಗೆ ಇಳಿಯುತ್ತಿದ್ದಾರೆ. ೧೫೦ ವಿದೇಶಿಗರನ್ನು ಗುರುತಿಸಿ, ಅಂಥವರನ್ನು ಬಂಧಿಸಿ ವಾಪಸ್ ಕಳಿಹಿಸಲಾಗಿದೆ. ವಿದೇಶಿ ಯುವಕರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಸಿಐಡಿ ಮಾದಕದ್ರವ್ಯ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಎಡಿಜಿಪಿ ಮತ್ತು ಐಜಿಪಿ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯದಲ್ಲಿ ೪೩ ಸೆನ್ (ಸೈಬರ್, ನಾರ್ಕೋಟಿಕ್ ಮತ್ತು ಎಕನಾಮಿಕ್ ಅಫೆನ್ಸ್) ಸ್ಥಾಪಿಸಲಾಗಿದ್ದು, ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿದೇಶದಿಂದ ಬರುವ ಪಾರ್ಸೆಲ್‌ಗಳ ಮೇಲೆ ನಿಗಾವಹಿಸಲಾಗಿದೆ. ಡ್ರಗ್ಸ್ ಕುರಿತು ಸಾರ್ಜಜನಿಕತು ಮಾಹಿತಿ ನೀಡಲು ’ಮ್ಯಾಪ್‌ಡ್ರಗ್ಸ್’ ಮೊಬೈಲ್ ಅಪ್ಲಿಕೇಶನ್ ತರಲಾಗಿದೆ. ಇದರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಮುಲಾಜಿಲ್ಲದೆ ಕ್ರಮ:
ಸದಸ್ಯ ಡಾ. ಧನಂಜಯ್ ಸರ್ಜಿ ಅವರು, ಡಾರ್ಕ್‌ವೆಬ್ ಮೂಲಕ ಡ್ರಗ್ಸ್ ಬರುತ್ತಿದೆ. ಈ ಬಗ್ಗೆ ಗಮನಹರಿಸಬೇಕು. ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡು ಅಮಲಿನಲ್ಲಿ ಓಡಾಡುವ ವೀಡಿಯೋಗಳು ವೈರಲ್ ಆಗುತ್ತಿವೆ ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಅವರು, ದಂಧೆಯಲ್ಲಿ ಪೊಲೀಸರು ಭಾಗಿಯಾಗುತ್ತಿದ್ದಾರೆ. ಇದಕ್ಕೆ ನಿರ್ಧ್ಯಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಧ್ವನಿ ಎತ್ತಿದರು. ಇದಕ್ಕೆ ಗೃಹ ಸಚಿವ ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಈಗಾಗಲೇ ಸಾವಿರಾರು ಕೇಸ್‌ಗಳನ್ನು ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸರು ಭಾಗಿಯಾಗಿರುವುದು ಕಂಡು ಬಂದರೆ, ಅವರ ವಿರುದ್ಧವೂ ಯಾವುದೇ ರೀತಿಯ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.