೭ ದಿನ ಜಿಟಿ ಮಾಲ್ ಬಂದ್
ಬೆಂಗಳೂರು, ಜು. ೧೮- ಪಂಚೆಯುಟ್ಟು ಬಂದ ರೈತನಿಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ಜಿ.ಟಿ. ಮಾಲ್‌ನ್ನು ೭ ದಿನಗಳ ಕಾಲ ಬಂದ್ ಮಾಡಿಸುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿಂದು ಹೇಳಿದರು.ಪಂಚೆಯುಟ್ಟು ಬಂದ ರೈತನಿಗೆ ಪ್ರವೇಶ ನಿರಾಕರಿಸಿದ ಜಿ.ಟಿ. ಮಾಲ್ ವಿರುದ್ದ ಕ್ರಮ ಆಗಬೇಕು. ಈ ಮೂಲಕ ನಾಡಿನ ಸಾಂಸ್ಕೃತಿಕ ಉಡುಗೆಯನ್ನು ಅಪಮಾನಿಸುವವರಿಗೆ ಸಂದೇಶ ರವಾನೆಯಾಗಬೇಕು ಎಂದು ವಿಧಾನಸಭೆಯಲ್ಲಿಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಆದಿಯಾಗಿ ಎಲ್ಲಾ ಪಕ್ಷಗಳ ಸದಸ್ಯರು ಮಾಡಿದ ಒತ್ತಾಯಕ್ಕೆ ಸ್ಪಂದಿಸಿದ ಸರ್ಕಾರ ಜಿ.ಟಿ. ಮಾಲ್‌ನ್ನು ೭ ದಿನಗಳ ಕಾಲ ಬಂದ್ ಮಾಡಿಸುವ ಉತ್ತರವನ್ನು ನೀಡಿತು.ಜಿ.ಟಿ. ಮಾಲ್‌ನಲ್ಲಿ ರೈತನಿಗೆ ಆಗಿರುವ ಅಪಮಾನ ಖಂಡನಾರ್ಹ. ಪಂಚೆ ನಮ್ಮ ಸಾಂಸ್ಕೃತಿಕ ಉಡುಗೆ. ಪಂಚೆಯುಟ್ಟು ಬಂದವರನ್ನು ತಡೆಯುವ ಈ ಮಾಲೀಕರ ವರ್ತನೆ ಖಂಡನೀಯ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿ, ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದರು.ವಿಧಾನಸಭಾಧ್ಯಕ್ಷರ ಮಾತಿಗೆ ಸದನದಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿ ಬರೀ ಮಾಲ್ ಮಾತ್ರ ಅಲ್ಲ, ಸೆಂಚುರಿ, ಓರಿಂಗ್ ಸೇರಿದಂತೆ ಕೆಲವು ಪ್ರತಿಷ್ಠಿತ ಕ್ಲಬ್‌ಗಳಲ್ಲೂ ಇದೇ ಕಥೆ ಇದೆ. ಇಂಥವರಿಗೆಲ್ಲಾ ಒಂದು ಸಂದೇಶ ರವಾನೆ ಮಾಡಿ ಎಂಬ ಆಗ್ರಹವೂ ಸದನದಲ್ಲಿ ವ್ಯಕ್ತವಾದಾಗ ಅದಕ್ಕೆ ಸ್ಪಂದಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ನಾನು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ರೀತಿ ನಡೆದುಕೊಳ್ಳುವ ಮಾಲ್‌ನ್ನು ೭ ದಿನ ಬಂದ್ ಮಾಡುವ ಅವಕಾಶ ಕಾನೂನಿನಲ್ಲಿದೆ. ಅದರಂತೆ ಈ ಮಾಲ್‌ನ್ನು ೭ ದಿನ ಬಂದ್ ಮಾಡಿಸುವ ಕೆಲಸ ಮಾಡುವುದಾಗಿ ಹೇಳಿದರು.ಸಚಿವರ ಮಾತಿಗೆ ಇಡೀ ಸದನ ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿತು.ಇದಕ್ಕೂ ಮೊದಲು ವಿಧಾನಸಭಾಧ್ಯಕ್ಷ ಖಾದರ್ ಅವರೇ ಖುದ್ದು ಮಾಲ್‌ನಲ್ಲಿ ರೈತನಿಗೆ ಆಗಿರುವ ಅಪಮಾನವನ್ನು ಪ್ರಸ್ತಾಪಿಸಿ ಇದು ಖಂಡನಾರ್ಹ. ಮಾಲ್ ಮಾಲೀಕರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಮಾಲ್ ಮಾಲೀಕ ಶ್ರೀಮಂತನಿರಬಹುದು, ನಮಗೆ ಅದು ಮುಖ್ಯವಲ್ಲ, ಬಡವರು, ಶ್ರೀಸಾಮಾನ್ಯರು ಮುಖ್ಯ. ಮಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು.ಸಭಾಧ್ಯಕ್ಷರ ಮಾತಿಗೆ ದನಿಗೂಡಿಸಿದ ಲಕ್ಷ್ಮಣ್ ಸವದಿ, ಕಠಿಣ ಕ್ರಮ ಎಂದರೆ ಮಾಲ್‌ಗೆ ಒಂದು ವಾರ ವಿದ್ಯುತ್‌ನ್ನು ಸ್ಥಗಿತಗೊಳಿಸಿ, ಆಗ ಅವರಿಗೆ ಬುದ್ಧಿ ಬರುತ್ತದೆ, ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ಹೇಳಿದರು.ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ್, ಮಾಲ್‌ನ್ನು ಬಂದ್ ಮಾಡಿ ಎಂಬ ಆಗ್ರಹವನ್ನು ಮಾಡಿದರು.ಆಗ ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಅಶೋಕ್ ಪಟ್ಟಣ ಅವರು, ಮಾಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ ಸರಿ, ಆದರೆ ಬೆಂಗಳೂರಿನ ಸೆಂಚುರಿ, ಓರಿಂಗ್ ಕ್ಲಬ್ ಸೇರಿದಂತೆ ಕೆಲವು ಕ್ಲಬ್‌ಗಳಲ್ಲಿ ಪಂಚೆ ಹಾಕುವವರನ್ನು, ಚಪ್ಪಲಿ ಹಾಕಿಕೊಂಡು ಬರುವವರನ್ನು ಬಿಡುವುದಿಲ್ಲ. ಇವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.ಆಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪೀಠದಿಂದಲೇ ಒಂದು ಆದೇಶ ಆಗಲಿ ಎಂದು ಹೇಳಿದಾಗ, ಬಿಜೆಪಿ ಸದಸ್ಯರು ನೀವೇ ಸರ್ಕಾರ ಹೀಗೆ ಹೇಳಿದರೆ ಹೇಗೆ, ನೀವೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಬಿಜೆಪಿ ಸದಸ್ಯರಾದ ಸುರೇಶ್‌ಕುಮಾರ್ ಎಲ್ಲರೂ ಮಾಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಈ ಹಂತದಲ್ಲಿ ಮಾತನಾಡಿದ ಸಚಿವ ಮಹದೇವಪ್ಪ ಅವರು, ಯಾವುದೇ ವ್ಯಕ್ತಿಯ ಘನತೆ, ಸ್ವಾಭಿಮಾನಕ್ಕೆ ಧಕ್ಕೆ ತರುವುದು ಸಂವಿಧಾನ ವಿರೋಧಿ. ಈ ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಾಗ ಅದಕ್ಕೆ ಒಪ್ಪದ ಆಡಳಿತ ಮತ್ತು ವಿಪಕ್ಷ ಸದಸ್ಯರು ಕ್ರಮ ಏನು ಎಂಬುದನ್ನು ಹೇಳಿ ಎಂದು ಪಟ್ಟು ಹಿಡಿದರು.
ಆಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಎದ್ದುನಿಂತ ರೈತನಿಗೆ ಅಪಮಾನ ಮಾಡಿರುವ ಜಿ.ಟಿ. ಮಾಲ್‌ನ್ನು ೭ ದಿನ ಬಂದ್ ಮಾಡಿಸುವುದಾಗಿ ಹೇಳಿ, ಈ ಕುರಿತ ಚರ್ಚೆಗೆ ತೆರೆ ಎಳೆದರು.
ಜಿಟಿ ಮಾಲ್ ಮಾಲೀಕರ ವಿರುದ್ಧ ಎಫ್‌ಐಆರ್
ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ್ದ ಜಿ.ಟಿ.ವರ್ಲ್ಡ್ ಶಾಪಿಂಗ್ ಮಾಲ್ ಮಾಲೀಕರು ಮತ್ತು ಸೆಕ್ಯುರಿಟಿ ಗಾರ್ಡ್ ಅರುಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಧರ್ಮರಾಜ್ ಗೌಡ ಎಂಬವರು ನೀಡಿರುವ ದೂರಿನನ್ವಯ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜಿ.ಟಿ.ವರ್ಲ್ಡ್ ಶಾಪಿಂಗ್ ಮಾಲ್ ಮಾಲೀಕರು ಮತ್ತು ಸೆಕ್ಯುರಿಟಿ ಗಾರ್ಡ್ ಅರುಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.’ಮಾಲ್‌ನ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದೆ ರೈತನಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ’ ಎಂದು ಆರೋಪಿಸಿ ಧರ್ಮರಾಜ್ ದೂರು ನೀಡಿದ್ದಾರೆ. ಇದರನ್ವಯ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:
ಕಳೆದ ಜು.೧೬ ಸಂಜೆ ೬ ಗಂಟೆ ಸುಮಾರಿಗೆ ಹಾವೇರಿ ಮೂಲದ ನಾಗರಾಜ್ ಎಂಬವರು ತನ್ನ ತಂದೆಯೊಂದಿಗೆ ಜಿ.ಟಿ.ಮಾಲ್‌ಗೆ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ನಾಗರಾಜ್ ಅವರ ತಂದೆಗೆ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಬ್ಬಂದಿಯಲ್ಲಿ ಮನವಿ ಮಾಡಿದರೂ ಸಹ ಮಾಲ್ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
ಇದಕ್ಕೆ ಕಾರಣವೇನು ಎಂದು ನಾಗರಾಜ್ ಮಾಲ್ ಮೇಲ್ವಿಚಾರಕರನ್ನು ಪ್ರಶ್ನಿಸಿದಾಗ, “ಈ ರೀತಿ ಬಟ್ಟೆ ಧರಿಸಿದವರಿಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ” ಎಂದು ಸೆಕ್ಯುರಿಟಿ ಗಾರ್ಡ್ ಉತ್ತರಿಸಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ನಾಗರಾಜ್ ಹಂಚಿಕೊಂಡಿದ್ದರು. ಆ ಬಳಿಕ ಮಾಲ್ ಸಿಬ್ಬಂದಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು. ನಂತರ ಎಚ್ಚೆತ್ತ ಮಾಲ್ ಸಿಬ್ಬಂದಿ ರೈತ ಫಕೀರಪ್ಪರನ್ನು ಕರೆದು ಕ್ಷಮೆಯಾಚಿಸಿ, ಸನ್ಮಾನಿಸಿದ್ದರು.