ತೊಗರಿ, ಕಡಲೆ, ಉದ್ದು ದರ ಇಳಿಕೆಗೆ ಸಚಿವ‌ ಜೋಶಿ ಸೂಚನೆ
ನವದೆಹಲಿ: ಬೇಳೆ-ಕಾಳು ಬೆಲೆ ಇಳಿಸುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಬುಧವಾರ ಸೂಚಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಉನ್ನತ ಸಭೆ ನಡೆಸಿ ಬೇಳೆ ಕಾಳುಗಳ ದರ ಇಳಿಕೆಗೆ ತ್ವರಿತ ಕ್ರಮ‌ಕೈಗೊಳ್ಳಬೇಕೆಂದು ಜೋಶಿ ನಿರ್ದೇಶನ ನೀಡಿದ್ದಾರೆ.
ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ , ತೊಗರಿ, ಕಡಲೆ ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಆದರೆ,ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ – ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಧಾನ್ಯಗಳು ದೊರೆಯುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಸಚಿವರು ಹೇಳಿದರು.
ಸಣ್ಣ-ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಜೋಶಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಎಚ್ವರಿಕೆ ನೀಡಿದ್ದಾರೆ