ವರುಣನ ರುದ್ರ ನರ್ತನ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೭:ರಾಜ್ಯದ ಹಲವೆಡೆ ಮುಂಗಾರು ಮಳೆಯ ರುದ್ರ ನರ್ತನ ಮುಂದುವರೆದಿದೆ. ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಗುಡ್ಡ ಕುಸಿದು ೭ ಮಂದಿ ಸಾವನ್ನಪ್ಪಿದ್ದರು.ಇಂದು ಕಾರವಾರ ತಾಲ್ಲೂಕಿನಲ್ಲಿ ಮನೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ
ಸಂಭವಿಸಿದ್ದು, ಈ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ.ಹಲವೆಡೆ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.ಅಂಕೋಲಾ-ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದ ಪ್ರಕರಣದಲ್ಲಿ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಡ್ಡ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಬಿದ್ದ ಹಿನ್ನೆಲೆಯಲ್ಲಿ ನದಿ ಬದಿಯಿರುವ ಉಳುವರೆ ಗ್ರಾಮಕ್ಕೆ ಹಾನಿಯಾಗಿದೆ. ಸುನಾಮಿ ರೀತಿಯ ನೀರು ಗ್ರಾಮಕ್ಕೆ ನುಗ್ಗಿದ್ದು, ಮೂರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮಹಿಳೆಯು ನೀರು ಪಾಲಾಗಿದ್ದಾರೆ.ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳು ನೆಲಸಮವಾಗಿದ್ದು, ಸೀತಿಗೌಡ (೬೫) ವೃದ್ಧೆ ನಾಪತ್ತೆಯಾಗಿದ್ದಾರೆ. ೧೪ ಜನರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಅಂಕೋಲಾ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರವಾರ, ಕುಮಟ ತಾಲ್ಲೂಕುಗಳಲ್ಲಿ ೨೨ ಮನೆಗಳಿಗೆ ಹಾನಿಯಾಗಿದ್ದು, ಅವರಿಗೆ ಕಾರವಾರ, ಕುಮಟ ತಾಲ್ಲೂಕುಗಳಲ್ಲಿ ೨೬ ಕಾಳಜಿ ಕೇಂದ್ರಗಳನ್ನು ತೆರೆದು ೨,೩೬೮ ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಅವರಿಗೆ ಊಟ, ವಸತಿ, ಆರೋಗ್ಯ ತಪಾಸಣೆ ಅಗತ್ಯವಿರುವ ಔಷಧ ಸೌಲಭ್ಯಗಳನ್ನು ಒದಗಿಸಲಾಗಿದೆ.ಗುಡ್ಡ, ನದಿ, ಹಳ್ಳ, ಕೆರೆಗಳು ಇರುವ ಸಮೀಪದಲ್ಲಿ ವಾಸ ಮಾಡುತ್ತಿರುವ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ತಿಂಗಳ ೧೮ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಉಡುಪಿ ಜಿಲ್ಲೆಯ ಭ್ರಮ್ಮಾವರ ತಾಲ್ಲೂಕಿನಲ್ಲಿ ಮಳೆ ಹಾವಳಿಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೀತಾ ನದಿ ತುಂಬಿ ಹರಿಯುತ್ತಿದ್ದು, ಬನ್ನಾಡಿ ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಸಂಸದ ಕೋಟಾಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾಫಿನಾಡು ಚಿಕ್ಕಮಗಳೂರಿನಲ್ಲೂ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆರೆ ಕಟ್ಟೆ ಘಟ್ಟ ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಿಂದಾಗಿ ಶೃಂಗೇರಿ ನದಿ ಉಕ್ಕಿ ಹರಿಯುತ್ತಿದೆ. ಮಳೆಯಿಂದಾಗಿ ಗಾಂಧಿ ಮೈದಾನ eಲವೃತಗೊಂಡಿದೆ.ವರುಣನ ಅಬ್ಬರಕ್ಕೆ ಶೃಂಗೇರಿಯಲ್ಲೂ ನೆರೆ ಪರಿಸ್ಥಿತಿ ಇಳಿದಿಲ್ಲ. ಇದರಿಂದಾಗಿ ಭಾರತಿ ತೀರ್ಥ ರಸ್ತೆ ಮುಳುಗಡೆಯಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.ಹಾಸನದಲ್ಲೂ ವರುಣನ ಅಬ್ಬರ ಮುಂದುವರೆದಿದ್ದು, ತೆಂಗಿನಮರ ಮಾರುತಿ ಓಮ್ನಿ ಕಾರಿನ ಮೇಲೆ ಬಿದ್ದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಸಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಕೊಡಗು ಜಿಲ್ಲೆಯಲ್ಲೂ ವರುಣನ ರುದ್ರ ನರ್ತನ ಮುಂದುವರೆದಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಮಡಿಕೇರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಭಾರಿ ಅವಾಂತರವೇ ಸೃಷ್ಟಿಯಾಗಿದೆ.ನಾಪೋಕ್ಲು-ಚೆರೆಯಪರಂಬು, ನಾಪೋಕ್ಲು-ಹೊದವಾಡ-ಬೊಳಿಬಾನಿ ರಸ್ತೆ ಜಲಾವೃತಗೊಂಡಿದ್ದು, ಜನರು ಪರದಾಡುವಂತಾಗಿದೆ.ಭಾರಿ ಬಿರುಗಾಳಿ ಮಳೆಯಿಂದಾಗಿ ವಿರಾಜಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಬಳಿ ಬೃಹತ್ ಗಾತ್ರದ ಮರ ರಾಜ್ಯ ಹೆದ್ದಾರಿ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.ಮಳೆಯಿಂದಾಗಿ ಜಲಪಾತಗಳು ಭೋರ್ಗರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ನದಿ,ತೊರೆಗಳು ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ವೆಂಕಟರಾಜ ಆದೇಶ ಹೊರಡಿಸಿದ್ದಾರೆ.
೪-೫ ದಿನ ಮಳೆ
ರಾಜ್ಯದ ಹಲವೆಡೆ ಇನ್ನೂ ೪ ದಿನ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ,ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆ ಬೀಳಲಿದೆ.
ಮಲೆನಾಡು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ. ಕರಾವಳಿಯಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದ್ದು, ದ.ಕನ್ನಡ, ಉ.ಕನ್ನಡ ಜಿಲ್ಲೆಗಳಿಗೆ ಮುನ್ನೆಚ್ಚೆರಿಕೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ.
ಗುಡ್ಡ ಕುಸಿತ ಪ್ರಕರಣ ಸಾವಿನ ಸಂಖ್ಯೆ ೨೦!
ಕಾರವಾರ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ನಿನ್ನೆ ಭಾರಿ ಗಾತ್ರದ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ೨೦ ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ೭ ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅನಾಹುತ ಮತ್ತಷ್ಟು ಭೀಕರವಾಗಿದ್ದು, ೨೦ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಗುಡ್ಡ ಕುಸಿತ ಉಂಟಾದಾಗ ಮಣ್ಣಿನ ರಭಸದಿಂದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ವೊಂದು ಗಂಗಾವಳಿ ನದಿಗೆ ಜಾರಿ ಬಿದ್ದ ದೃಶ್ಯ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಗುಡ್ಡದ ಕೆಳಗಿದ್ದ ೨ ಮನೆಗಳು ಹಾಗೂ ಟೀ ಅಂಗಡಿ ಧ್ವಂಸಗೊಂಡಿವೆ.
ಒಂದು ಮನೆಯಲ್ಲಿದ್ದ ಪೂರ್ತಿ ಕುಟುಂಬ ಸಾವನ್ನಪ್ಪಿದ್ದರೆ, ಮತ್ತೊಂದು ಮನೆಯಲ್ಲಿದ್ದ ೭ ಜನರ ಪೈಕಿ ಓರ್ವ ವೃದ್ಧೆ ಮಾತ್ರ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.