ಕಸ ವಿಲೇವಾರಿಗೆ ವಿರೋಧ, ಲಾರಿ ತಡೆದು ಪ್ರತಿಭಟನೆ
ಕೆ.ಆರ್.ಪುರ, ಜು.೧೭-ಮಹದೇವಪುರ ಕ್ಷೇತ್ರದ ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ ಸುರಿಯುತ್ತಿರುವ ಕಸದ ರಾಶಿಯಿಂದ ದುರ್ವಾಸನೆ, ಸೊಳ್ಳೆಕಾಟ, ರಾಸಾಯನಿಕ ಮಿಶ್ರಿತ ನೀರು( ಲಿಚ್ಚೆಡ್) ಸೇರಿದಂತೆ ವಿವಿಧ ಸಮಸ್ಯೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆಗೆ ಕಲ್ಲು ಮಣ್ಣು ಸುರಿದು ಕಸದ ಲಾರಿಗಳನ್ನು ತಡೆದು ಪ್ರತಿಭಟಿಸಿದರು.ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೀಟಗಾನಹಳ್ಳಿ, ಹೊಸೂರು ಬಂಡೆ ಕಲ್ಲು ಕ್ವಾರಿಗಳಲ್ಲಿ ಬಿಬಿಎಂಪಿಯು ಅವೈಜ್ಞಾನಿಕವಾಗಿ
ಕಸ ವಿಲೇವಾರಿ ಮಾಡುತ್ತಿರುವುದರಿಂದ ಕಣ್ಣೂರು, ಹೊಸೂರು ಬಂಟೆ, ಕಾಡುಸೊಣ್ಣಪ್ಪನಹಳ್ಳಿ, ಮಿಟ್ಟಿಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ
ದುರ್ವಾಸನೆ ಬೀರುತ್ತಿದ್ದು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಟ್ಟಿದೆ.ನಗರದಲ್ಲಿ ಉತ್ಪತ್ತಿಯಾಗುವ ೮೦ % ತ್ಯಾಜ್ಯವನ್ನು ಈ ಘಟಕದಲ್ಲಿ ಅವೈಜ್ಞಾನಿಕ ಸುರಿಯಲಾಗುತ್ತಿದೆ.ಸರಿಯಾದ ನಿರ್ವಹಣೆ ಇಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾತಾವರಣ ಕಲುಷಿತಗೊಂಡು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಘನ ತಾಜ್ಯ ಘಟಕಕ್ಕೆ ಹೊಂದಿಕೊಂಡಿರುವ ಕಣ್ಣೂರು ಕೆರೆಗೆ ರಾಸಾಯನಿಕ ವಿಷ (ಲಿಚ್ಚೆಡ್ )ನೀರು ಸೇರ್ಪಡೆಯಾಗುತ್ತಿದೆ, ಇದರ ಪರಿಣಾಮವಾಗಿ ನಾಲ್ಕು ಐದು
ಜಾನುವಾರುಗಳು ಸಾವಿಗೀಡಾಗಿವೆ, ಐದಾರು ಬೋರ್ ವೆಲ್ ಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ ಎಂದು ದೂರಿದರು.ಇನ್ನು ನಗರದಲ್ಲಿ ಅತಿಹೆಚ್ಚು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ, ಇಲ್ಲಿನ ವಾತಾವರಣ ಸ್ಥಿತಿ ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವ ಗೋಜಿಗೆ ಹೋಗುತ್ತಿಲ್ಲ. ಯಾವುದೇ ಸರ್ಕಾರ ಬಂದರು ಗ್ರಾಮಸ್ಥರು ಪ್ರತಿಭಟನೆ ಮಾಡಿದಾಗ ಬಂದು ಕೇವಲ ಭರವಸೆ ಕೊಟ್ಟು ಹೋಗುತ್ತಾರೆ.ಉಸ್ತುವಾರಿ ಸಚಿವರು ಡಿ.ಕೆ.ಶಿವಕುಮಾರ್, ಬಿಬಿಎಂಪಿ ಆಯುಕ್ತರು ಕಳೆದ ಎಂಟು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಗ್ರಾಮಸ್ಥರ ಸಭೆಯಲ್ಲಿ ಸ್ಥಳೀಯರು ಕಲ್ಲಿನ ಕ್ವಾರಿಯಲ್ಲಿ ಕಸ ಸುರಿಯುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು, ಸರಿಯಾಗಿ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ, ಸೊಳ್ಳೆಗಳ ಕಾಟ, ದುರ್ವಾಸೆ ಹೆಚ್ಚಾಗಿ ಬೀರುತ್ತಿದೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಯನ್ನು ಮರೆತು ಬಿಟ್ಟಿದ್ದಾರೆ ಎಂದರು.ನಗರ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವವರೆಗೂ ಕಸ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಲಲಿತಾ ದೇವರಾಜ್, ಸ್ಥಳೀಯರಾದ ಮೋಹನ್ ರೆಡ್ಡಿ, ರಮೇಶ್, ಬ್ರಹ್ಮಾನಂದ ರೆಡ್ಡಿ, ರಾಘವೇಂದ್ರ , ಬೈರೆಗೌಡ, ಶೋಭಪ್ರಕಾಶ್, ಶ್ರೀನಿವಾಸ , ಯಶೋದಮ್ಮ, ಕಲಾವತಿ, ಶ್ರೀರಾಮ್, ಹರೀಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಸುದ್ದಿಚಿತ್ರ:
ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮಪಂಚಾಯತಿ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ ಸುರಿಯುತ್ತಿರುವ ಕಸವನ್ನು ನಿಲ್ಲಿಸುವಂತೆ ಲಾರಿಗಳನ್ನು ತಡೆದು ನಿವಾಸಿಗಳು ಪ್ರತಿಭಟಿಸಿದರು.