ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು. ೧೭- ಮಲೆನಾಡಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಇಂದು ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ೬೩೩೨೦ ಕ್ಯೂಸೆಕ್ ನೀರು ಹರಿದು ಬರುತ್ತಿರುವುದು. ಕಳೆದ ವರ್ಷ ಮಳೆ ಅಭಾವದಿಂದ ಜಲಾಶಯ ಭರ್ತಿಯಾಗದೇ ಒಂದೇ ಬೆಳೆ ಪಡೆದಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.
ಸದ್ಯ ತುಂಗಾ ಜಲಾಶಯದಿಂದ ೭೦೪೯೭ ಕ್ಯೂಸೆಕ್ ನೀರು ಹರಿಬಿಟ್ಟಿರುವುದರಿಂದ ತುಂಗಭದ್ರ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವುದು ಖಚಿತವಾಗಿದೆ.
ಜಲಾಶಯದ ಗರಿಷ್ಟ ಮಟ್ಟ ೧೬೩೩ ಅಡಿ ಇದ್ದು. ಇಂದು ೧೬೧೧ ಕ್ಕೆ ತಲುಪಿದೆ. ಜಲಾಶಯದಲ್ಲಿ ಈಗಾಗಲೇ ೪೦ ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮರ್ಥ ೧೦೫.೭೮ ಟಿಎಂಸಿಯಾಗಿದೆ.ಜಲಾಶಯದಿಂದ ೨೧೨ ಕ್ಯೂಸೆಕ್ ಮಾತ್ರ ಹೊರ ಬಿಡುತ್ತಿದೆ. ಮುಖ್ಯ ಕಾಲುವೆಗಳಿಗೆ ಇನ್ನು ನೀರು ಹರಿಸಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು, ಭತ್ತದ ನಾಟಿ, ಮೆಣಸಿನಕಾಯಿ, ಮುಸುಕಿನಜೋಳ, ಹತ್ತಿ ಮದಲಾದ ಬೆಳೆ ಬಿತ್ತನೆಗೆ ಸಜ್ಜಾಗಿದ್ದಾರೆ.
ಬೇಗ ನೀರು ಬಿಡಿ:
ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅಲ್ಲದೆ ತುಂಗಾ ಜಲಾಶಯದಿಂದಲೂ ೭೦ ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಕೂಡಲೇ ತುಂಗಭದ್ರ ಕಾಲುವೆಗಳಿಗೆ ನೀರು ಬಿಡಬೇಕು.ದರೂರು ಪುರುಷೋತ್ತಮಗೌಡ ಅಧ್ಯಕ್ಷರು, ತುಂಗಭದ್ರ ರೈತ ಸಂಘ.ಬಳ್ಳಾರಿ.
ಕಾಲುವೆಗಳಿಗೆ ನೀರು:
ಸದ್ಯ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ನೋಡಿದರೆ. ನಾಳೆಗೆ ಜಲಾಶಯದ ಸಂಗ್ರಹ ಸಾಮರ್ಥ್ಯ ೫೦ ಟಿಎಂಸಿ ದಾಟಲಿದೆ. ಹಾಗಾಗಿ ಕೃಷಿ ಚಟುವಟಿಕೆಗೆ ಎಡ ಮತ್ತು ಬಲದಂಡೆಯ ಕೆಳ ಹಾಗು ಮೇಲ್ಮಟ್ಟದ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನಿಸಬೇಕಿತ್ತು. ಸಭೆ ಕರೆಯುವುದು ವಿಳಂಬವಾಗುವುದರಿಂದ ಇಂದು ಶಾಸಕರುಗಳ ಜೊತೆ ಮಾತನಾಡಿ ನಾಳೆ ಇಲ್ಲ ನಾಡಿದ್ದು ಕಾಲುವೆಗಳಿಗೆ ನೀರು ಬಿಡಲು ಸೂಚಿಸಲಿದೆ ಎಂದು ಸಂಜೆವಾಣಿಯೊಂದಿಗೆ ಮಾತನಾಡಿದ, ತುಂಗಭದ್ರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಿ ಅವರು ಹೇಳಿದ್ದಾರೆ.