೨೦ ವರ್ಷಗಳಿಂದ ನಾಪತ್ತೆಯಾಗಿದ್ದ ಕೊಲೆ ಆರೋಪಿ ಸಿನಿಮಾ ನಿರ್ದೇಶಕ ಸೆರೆ
ಬೆಂಗಳೂರು,ಜು.೧೭-ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ೨೦ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕನ್ನಡ ಮಾತ್ರವಲ್ಲದೆ ತಮಿಳಿನಲ್ಲೂ ಒಂದೆರಡು ಸಿನಿಮಾ ಮಾಡಿದ್ದ ಗಜೇಂದ್ರ ಅಲಿಯಾಸ್ ಗಜನನ್ನು ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ೨೦೦೪ರಲ್ಲಿ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಕೊತ್ತರವಿ ಕೊಲೆಯಾಗಿತ್ತು.ಇದರಲ್ಲಿ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ ಎಂಟನೇ ಆರೋಪಿಯಾಗಿದ್ದ.ಈ ಸಂಬಂಧ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ ೧ ವರ್ಷ ಶಿಕ್ಷೆ ಕೂಡ ವಿಧಿಸಿದ್ದು, ಜೈಲುವಾಸ ಅನುಭವಿಸಿದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ.ಜಾಮೀನು ಪಡೆದ ಬಳಿಕ ಹಲವು ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.
ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಇದೀಗ ಗಜೇಂದ್ರನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಗಜ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ.