ತಿರುಪತಿ ಲಡ್ಡು ಕಲಬೆರಕೆ ಪ್ರಕರಣ ನಾಡಿದ್ದು ಸುಪ್ರೀಂನಲ್ಲಿ ವಿಚಾರಣೆ
ಅಮರಾವತಿ,ಸೆ.೨೮- ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದ ಪ್ರಸಾದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ವಿವಾದ ಸುಪ್ರೀಂ ಕೋರ್ಟ್ ತಲುಪಿದೆ. ಸೋಮವಾರ ದಿ.೩೦ರಂದು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರು ಅರ್ಜಿ ಸಲ್ಲಿಸಿದ್ದಾರೆ. ಸುಬ್ಬಾ ರೆಡ್ಡಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ, ಲಡ್ಡುಗಳನ್ನು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಈ ಆರೋಪದಿಂದ ರಾಜಕೀಯ ಪಕ್ಷಗಳಲ್ಲಿ ವಿವಾದ ಭುಗಿಲೆದ್ದಿದೆ.
ಇದೀಗ ಸುಬ್ರಮಣಿಯನ್‌ಸ್ವಾಮಿ ಮತ್ತು ವೈವಿ ಸುಬ್ಬಾರೆಡ್ಡಿ ಇಬ್ಬರೂ ಈ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಬಿಜೆಪಿ ನಾಯಕರು ಈ ವಾರದ ಆರಂಭದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ಲಡ್ಡು ತಯಾರಿಸಲು ಬಳಸುವ ತುಪ್ಪದ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಕೆ ಪ್ರಕರಣದ ತನಿಖೆಗೆ ಆಂಧ್ರ ಪ್ರದೇಶ ಸರ್ಕಾರ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನೇಮಿಸಿದೆ. ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಪಾವಿತ್ರ್ಯತೆಯನ್ನು ರಕ್ಷಿಸುವ ಬದ್ಧತೆಯ ಭಾಗವಾಗಿ, ಆಂಧ್ರ ಪ್ರದೇಶ ಸರ್ಕಾರವು ಸಂಪೂರ್ಣ ವಿಷಯದ ಬಗ್ಗೆ ವಿವರವಾದ ಮತ್ತು ಸಮಗ್ರ ತನಿಖೆ ನಡೆಸಲು ಎಸ್‌ಐಟಿಯನ್ನು ರಚಿಸಿದೆ ಎಂದು ಮುಖ್ಯ ಕಾರ್ಯದರ್ಶಿ ನಿರಭ್ ಕುಮಾರ್ ಪ್ರಸಾದ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಲಡ್ಡುಗಳಲ್ಲಿ ಕಲಬೆರಕೆ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸೆಪ್ಟೆಂಬರ್ ೨೨ ರಂದು ಘೋಷಿಸಿದ್ದಾರೆ. ಎಸ್‌ಐಟಿಯು ಗುಂಟೂರು ವ್ಯಾಪ್ತಿಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸರ್ವೇಶ್ ತ್ರಿಪಾಠಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿದೆ.