ಲೆಬನಾನ್- ಇಸ್ರೇಲ್ ಸಂಘರ್ಷ ಇನ್ನಷ್ಟು ತೀವ್ರ
ಬೈರುತ್,ಸೆ.೨೮- ಲೆಬನಾನ್‌ನ ಬೈರುತ್‌ನ ದಕ್ಷಿಣ ಉಪನಗರದ ಮೇಲೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಮಾಡಿದ್ದು ಇದರಿಂದ ಪ್ರತೀಕಾರವಾಗಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆ ಇದೆ.
ಅಮೆರಿಕಾ ಪ್ರವಾಸದಲ್ಲಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೇರಿಕಾ ಭೇಟಿಯನ್ನು ಹಠಾತ್ತನೆ ಮೊಟಕುಗೊಳಿಸಿ ಇಸ್ರೇಲ್‌ನತ್ತ ಮುಖ ಮಾಡಿದ್ದಾರೆ.
ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆ ಹಿಜ್ಬುಲ್ಲಾ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಉಗ್ರ ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ.
ಬೈರುತ್ ನಗರದ ಮೇಲೆ ನಿರತಂತರ ಐದು ಗಂಟೆಗಳ ಕಾಲ ನಡೆದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ, ಇದರಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಮತ್ತಷ್ಟು ಸಂಘರ್ಷ ಎದುರಾಗಬಹುದು ಎಂದು ಹೇಳಲಾಗಿದೆ
ಲೆಬನಾನಿನ ಉಗ್ರಗಾಮಿ ಗುಂಪು ಈ ಬಗ್ಗೆ ಯಾವುದೇ ಮಾಹಿತಿ ಖಚಿತ ಪಡಿಸಿಲ್ಲ, ಆದರೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮೃತಪಟ್ಟಿದ್ದಾರೆ ಎನ್ನಲಾಗಿದೆ
ಇಸ್ರೇಲ್ ಮತ್ತು ಹಿಜ್ಬೊಲ್ಲಾದೊಂದಿಗಿನ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಕೊನೆಗೆ ಹಿಜ್ಬುಲ್ಲಾ ಮುಖ್ಯಸ್ಥನ್ನು ಹತ್ಯೆ ಮಾಡುವಲ್ಲಿ ಇಸ್ರೇಲ್ ಸೇನೆ ಯಶಸ್ವಿಯಾಗಿದೆ ಎನ್ನಲಾಗಿದೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬೆಂಜಮಿನ್ ನೆತನ್ಯಾಹು ಹಿಜ್ಬುಲ್ಲಾ ವಿರುದ್ದ ಮೇಲೆ ಇಸ್ರೇಲ್ ದಾಳಿಗಳು ಮುಂದುವರಿಯುತ್ತದೆ ಎಂದು ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಈ ಹಿಜ್ಬುಲ್ಲಾ ಮುಖ್ಯಸರ ಹತ್ಯೆ ಮಾಡಲಾಗಿದೆ
ಟೆಹ್ರಾನ್ ತನ್ನ ಸ್ಥಿತಿ ಪರಿಶೀಲಿಸುತ್ತಿದೆ ಎಂದು ಇರಾನಿನ ಹಿರಿಯ ಭದ್ರತಾ ಅಧಿಕಾರಿ ತಿಳಿಸಿದ್ದಾರೆ. ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಅಲಿ ಇಸ್ಮಾಯಿಲ್ ಮತ್ತು ಅವರ ಉಪ ಹುಸೇನ್ ಅಹ್ಮದ್ ಇಸ್ಮಾಯಿಲ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ೯೧ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ .