ಪಕ್ಷಾಂತರಿಗಳ ಶುದ್ಧೀಕರಣ ಸಮಾರಂಭ
ಜೈಪುರ,ಸೆ.೨೮- ಜೈಪುರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರನ್ನು ಶುದ್ಧೀಕರಣ ಮಾಡಿರುವ ಪ್ರಸಂಗ ನಡೆದಿದೆ. ಪಕ್ಷಾಂತರಿಗಳಿಗೆ ಗಂಗಾಜಲ ಮತ್ತು ಗೋಮೂತ್ರ ಪ್ರೋಕ್ಷಣೆ ಮಾಡಿ ಶಾಸಕ ಬಾಲಮುಕುಂದ್ ಆಚಾರ್ಯ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್ (ಜೆಎಂಸಿಎಚ್) ಕಚೇರಿಯನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಬೇಕೆಂದು ಹವಾ ಮಹಲ್ ಶಾಸಕ ಆಚಾರ್ಯ ಅವರು, ಗಂಗಾಜಲ ಮತ್ತು ಗೋಮೂತ್ರ ಮಿಶ್ರಣವನ್ನು ಕೌನ್ಸಿಲರ್‌ಗಳು ಮತ್ತು ಕಚೇರಿ ಆವರಣದ ಮೇಲೆ ಸಿಂಪಡಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಮುನೇಶ್ ಗುರ್ಜರ್ ಅವರ ಜಾಗಕ್ಕೆ ಕುಸುಮ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಕಾಂಗ್ರೆಸ್ ೭ ಮತ್ತು ಪಕ್ಷೇತರ ಒಬ್ಬ ಸದಸ್ಯರ ಬೆಂಬಲ ನೀಡಿದ್ದಾರೆ. ಇವರೆಲ್ಲ ಬಿಜೆಪಿ ಸೇರ್ಪಡೆಯಾದರು.
ಮಂಗಳವಾರ ಈ ಎಂಟು ಮಂದಿ ಬಿಜೆಪಿ ಸೇರಿದ್ದಾರೆ. ಯಾದವ್ ಬುಧವಾರ ಅಧಿಕಾರ ವಹಿಸಿಕೊಳ್ಳುವ ಮೊದಲು, ಶಾಸಕ ಆಚಾರ್ಯ ಅವರು ಜೆಎಂಸಿಎಚ್ ಆವರಣ, ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳಿಗೆ ಶುದ್ಧೀಕರಣ ಸಮಾರಂಭ ನಡೆಸಿದ್ದಾರೆ.
ನಾನು ಗಂಗಾಜಲ ಮತ್ತು ಗೋಮೂತ್ರದ ಮಿಶ್ರಣವನ್ನು ಹೊಂದಿರುವ ಬಾಟಲಿಯನ್ನು ಇಟ್ಟುಕೊಂಡಿದ್ದು, ನಿತ್ಯವೂ ಕುಡಿಯುತ್ತೇನೆ ಎಂದು ಆಚಾರ್ಯ ತಿಳಿಸಿದ್ದಾರೆ.