ಮುಡಾ: ಸಿಎಂ ವಿರುದ್ಧ ಎಫ್ ಐ ಆರ್ ದಾಖಲು: ಸಿದ್ದು ಎ1, ಪತ್ನಿ ಪಾರ್ವತಿ ಎ2
ಮೈಸೂರು, ಸೆ.27-ಮುಡಾ ಪ್ರಕರಣ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು.
ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ನಲ್ಲಿ ಅಧಿಕೃತವಾಗಿ ನಮೂದು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ A1, A2 ಆಗಿ ಸಿಎಂ ಪತ್ನಿ ಪಾರ್ವತಿ, A3 ಸಿಎಂ ಸಿದ್ದರಾಮಯ್ಯರ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು A4 ಆರೋಪಿ ಯಾಗಿದ್ದಾರೆ. ಕೋರ್ಟ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಬುಧವಾರ ಆದೇಶ ಹೊರಡಿಸಿದ್ದರು. ಡಿಸೆಂಬರ್ 24ರ ಒಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.
ಎಫ್ಐಆರ್ ಯಾರ ವಿರುದ್ಧ, ವಿವರ ಇಲ್ಲಿದೆ:
ಸಿದ್ದರಾಮಯ್ಯ, ಮುಖ್ಯಮಂತ್ರಿ (A1)
ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2)
ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3)
ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) ಮತ್ತು ಇತರರು‌.
ಕಾಯ್ದೆಗಳು:
ಭ್ರಷ್ಟಾಚಾರ ತಡೆ ಕಾಯ್ದೆ 1988,
ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲು,
ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ,
ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು,
ಸೆಕ್ಷನ್ 403 ಆಸ್ತಿಯ ದುರ್ಬಳಕೆ,
ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ
ಸೆಕ್ಷನ್ 420 ವಂಚನೆ,
ಸೆಕ್ಷನ್ 426 ದುಷ್ಕೃತ್ಯವೆಸಗುವುದು,
ಸೆಕ್ಷನ್ 465 ಫೋರ್ಜರಿ,
ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ,
ಸೆಕ್ಷನ್ 340 ಅಕ್ರಮ ಬಂಧನ,
ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು.