ಎಚ್ಚರ ತಪ್ಪಿದರೆ ಗೃಹ ಜ್ಯೋತಿ ಬಳಕೆದಾರರಿಗೆ ಸಾವಿರ ರೂ.ಬಿಲ್
ಬೆಂಗಳೂರು.ಜು.೧೫-ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮೀಟರ್ ರೀಡಿಂಗ್ ವೇಳೆ ಗ್ರಾಹಕರು ಎಚ್ಚರದಿಂದ ಇರಬೇಕಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ನಿಮ್ಮ ಮನೆಗೆ ಸಾವಿರ ಸಾವಿರ ಕರೆಂಟ್ ಬಿಲ್ ಬರುತ್ತೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಿಸಿತ್ತು. ನಂತರ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿತ್ತು ಕೂಡ. ಆ ಗ್ಯಾರಂಟಿಗಳ ಪೈಕಿ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಕೂಡ ಪ್ರಮುಖವಾದುದು.
ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಮೂಲೆ ಮೂಲೆಯಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆದು ಈಗಲೂ ಉಚಿತ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ರಾಜ್ಯ ಜನತೆಯ ಸ್ಥಿತಿ ದೇವರು ವರ ಕೊಟ್ರೂ ಪೂಜಾರಿ ಕೊಡ್ತಿಲ್ಲ ಅನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದ್ದರೂ ಸಹ ವಿದ್ಯುತ್ ಇಲಾಖೆಯ ಯಡವಟ್ಟಿನಿಂದ ಜನರಿಗೆ ಮಿತಿ ಮೀರಿ ಕರೆಂಟ್ ಬಿಲ್ ಕಟ್ಟಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಯಾವುದೇ ಗ್ರಾಹಕರು ನಮಗೆ ಶೂನ್ಯ ಕರೆಂಟ್ ಬಿಲ್ ಬರ್ತಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ, ಮೀಟರ್ ರೀಡಿಂಗ್ ಮಾಡುವ ಮುನ್ನ ನಿಮ್ಮ ಉಪಸ್ಥಿತಿ ಇರುವುದು ಉತ್ತಮ, ಇಲ್ಲದಿದ್ದರೆ ಶೂನ್ಯ ಬಿಲ್ ಬರೋರಿಗೆ ಸಾವಿರ ಸಾವಿರ ಬಿಲ್ ಬರೋದು ಪಕ್ಕಾ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಯಶವಂತಪುರದ ಏರಿಯಾದಲ್ಲಿ ೨೦ಕ್ಕೂ ಹೆಚ್ಚು ಗ್ರಾಹಕರಿಗೆ ಸಾವಿರಕ್ಕೂ ಹೆಚ್ಚು ಕರೆಂಟ್ ಬಿಲ್ ಬಂದಿದ್ದು, ಗೃಹಜ್ಯೋತಿ ಫಲಾನುಭವಿಗಳಿಗೆ ಬೆಸ್ಕಾಂ ಕರೆಂಟ್ ಬಿಲ್ ಶಾಕ್ ಕೊಟ್ಟಿದೆ. ಕಳೆದೆರಡು ತಿಂಗಳು ಸಾವಿರಕ್ಕೂ ಹೆಚ್ಚು ವಿದ್ಯುತ್ ಬಿಲ್ ಅನ್ನು ಮೀಟರ್ ರೀಡರ್ ಕೊಟ್ಟಿದ್ದು, ತನಗಿಚ್ಚೆ ಬಂದಂತೆ ಯಶವಂತಪುರ ಬೆಸ್ಕಾಂ ಯೂನಿಟ್ ಮೀಟರ್ ರೀಡರ್ ಬಿಲ್ ಕೊಟ್ಟಿದ್ದಾರೆ.
ಬೆಸ್ಕಾಂ ಕಂಪನಿಯ ಮೀಟರ್ ರೀಡರ್ ನಿರ್ಲಕ್ಷ್ಯಕ್ಕೆ ಗೃಹಜ್ಯೋತಿ ಫಲಾನುಭವಿಗಳಿಗೆ ಹೆಚ್ಚುವರಿ ಬಿಲ್ ಬಂದಿದ್ದು, ಕಳೆದ ಒಂಬತ್ತು ತಿಂಗಳಿನಿಂದ ಶೂನ್ಯ ಕರೆಂಟ್ ಬಿಲ್ ಕಟ್ಟುತ್ತಿರುವವರು ಶಾಕ್ ಆಗಿದ್ದಾರೆ. ಈ ತಿಂಗಳು ಬರೋಬ್ಬರಿ ೪,೨೭೩ ರೂ. ೧೬೪೬ ರೂ, ೧೪೦೦ ರೂ. ರೂ. ಕರೆಂಟ್ ಬಿಲ್ ಬಂದಿದೆ. ಹೀಗಾಗಿ ಕರೆಂಟ್ ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದು, ಈ ಬಗ್ಗೆ ಯಶವಂತಪುರ ಬೆಸ್ಕಾಂ ಕಚೇರಿಗೆ ಗ್ರಾಹಕರು ದೂರು ನೀಡಿದ್ದು, ಬೆಸ್ಕಾಂ ಅಧಿಕಾರಿಗಳು ಮಾತ್ರ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.