ಅಕ್ಷರದಾಸೋಹ ನೌಕರರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಬೆಂಗಳೂರು, ಜು. ೧೫- ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘಟನೆ (ಸಿಐಟಿಯು) ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿತು.
ಬಿಸಿಯೂಟ ನೌಕರರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಕೈಜೋಡಿಸಿದರು.
ಕಳೆದ ವರ್ಷ ಆಯುಕ್ತರ ಕಚೇರಿಯಲ್ಲಿ ನಮ್ಮ ಬೇಡಿಕೆಗಳ ಕುರಿತು ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಈಗಾಗಲೇ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಗಿತ್ತು.
ನ.೧೦, ೨೦೨೩ರಂದು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳ ಜೊತೆ ಜಂಟಿಸಭೆ ನಡೆದಿತ್ತು. ನ.೧೫ ರಂದು ಶಿಕ್ಷಣ ಸಚಿವರು ನಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಕುರಿತು ಲಿಖಿತವಾಗಿ ಪತ್ರ ಕಳುಹಿಸಿ, ಹೋರಾಟವನ್ನು ವಾಪಸ್ಸು ಪಡೆಯಲು ಕೋರಿದ್ದರಿಂದ ಸರ್ಕಾರ ನೀಡಿದ ಲಿಖಿತ ಭರವಸೆಯಿಂದಾಗಿ ಹೋರಾಟವನ್ನು ವಾಪಸ್ಸು ಪಡೆಯಲಾಗಿತ್ತು.
ಈ ಸಭೆಗಳಲ್ಲಿ ಮಾತುಕತೆ ನಡೆಸಿದಂತೆ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಅಡುಗೆ ನೌಕರರಿಗೆ ಇಡಿಗಂಟು ಜಾರಿ ಮಾಡುವ ಬಗ್ಗೆ ಸರ್ಕಾರವು ಸಹಮತ ಸೂಚಿಸಿತ್ತು. ಅಲ್ಲದೇ ಬಜೆಟ್ ಸಂದರ್ಭದಲ್ಲಿ, ಚುನಾವಣಾ ಸಂದರ್ಭದಲ್ಲಿ ಈ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೂ ಕೂಡಾ ಅದು ಜಾರಿ ಆಗಿಲ್ಲ. ೨೦೨೨ ರಿಂದ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಎಲ್ಲಾ ಬಿಸಿಯೂಟ ನೌಕರರಿಗೆ ೧ ಲಕ್ಷ ಇಡಗಂಟು ಕೊಡಬೇಕು.ಬಜೆಟ್ ನಲ್ಲಿ ಈ ನೌಕರರಿಗೆ ಹೆಚ್ಚಳ ಮಾಡಿದ ರೂ. ೧೦೦೦/- ವೇತನವನ್ನು ಜನವರಿ ೨೦೨೩ ರಿಂದ ಅನ್ವಯಿಸಿ ಜಾರಿಮಾಡಬೇಕು ಸೇರಿ ೧೬ ಬೇಡಿಕೆಗಳನ್ನು ಮುಂದಿಟ್ಟಿವೆ.