ಬಿಜೆಪಿ ರಾಜಕೀಯ ಪ್ರೇರಿತ ನಡೆಗೆ ಡಾ.ಶರಣಪ್ರಕಾಶ ಆಕ್ರೋಶ
ಕಲಬುರಗಿ:ಜು.13:ಲೋಕಸಭೆ ಚುನಾವಣೆಯಲ್ಲಿ ದೇಶ ಜನರು ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ತೀರ್ಪು ನೀಡಿದ್ದಾರೆ. ಹೀಗಾಗಿ ಆ ಮುಜುಗರದಿಂದ ತಪ್ಪಿಸಿಕೊಳ್ಳಲು. ಅಸಲಿಯತ್ತು ಮರೆಮಾಚಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಜೂ.25ನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಹೊರಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಪತ್ರಕರ್ತರ ಜತೆ ಮಾತನಾಡಿ, ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ ನಂತರವೂ ಮತ್ತೇ ಪ್ರಧಾನಿಯಾದರು. ಅಲ್ಲದೆ ಕಾಂಗ್ರೆಸ್ ಹಲವು ಸಲ ಅಧಿಕಾರ ನಡೆಸಿದೆ. ಆಗಲೇ ಜನರು ಕಾಂಗ್ರೆಸ್ ಪರ ತೀರ್ಪು ನೀಡಿಯಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರದ ಈ ನಡೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ವಿರೋಧಿಗಳು ಎಂದರೆ ಬಿಜೆಪಿಯವರು. ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದು ಬಿಜೆಪಿ. ಹೀಗಂತ ಆ ಪಕ್ಷದ ಸಂಸದರು, ಮಾಜಿ ಸಚಿವರೇ ಹೇಳಿಕೊಂಡಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಈ ಸಲ ಚಾರ್ ಸೌ ಪಾಸ್ ಎಂದು ಹೊರಟಿದ್ದರು. ಆದರೆ, ದೇಶದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಸಂವಿಧಾನ ತಿರುಚಲು ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀರ್ಪು ನೀಡಿದ್ದಾರೆ. ವಾಸ್ತವ ಹೀಗಿರುವಾಗ ಕೇಂದ್ರ ಸರ್ಕಾರ ಸಂವಿಧಾನ ಹತ್ಯಾ ದಿನ ಎಂದು ಘೋಷಣೆ ಮಾಡಿ ರಾಜಕೀಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಆಗ ಇತ್ತು. ಅದಕ್ಕೆ ಅಂತಹ ನಿರ್ಧಾರ ಕೈಗೊಂಡಿದ್ದರು. ಬಳಿಕ ಎಲ್ಲವೂ ಸರಿ ಹೋಗಿದೆ. ದೇಶವಾಸಿಗಳು ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಪರ ಮತ ಚಲಾಯಿಸಿ ತೀರ್ಪು ನೀಡಿದ್ದಾರೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಚಾರ್‍ಸೌ ಪಾರ್ ಎಂದು ಹೊರಟಿದ್ದ ಪ್ರಧಾನಿಗಳಿಗೆ ಹಾಗೂ ಬಿಜೆಪಿಯವರನ್ನು ಜನರು ಧಿಕ್ಕರಿಸಿದ್ದಾರೆ. ಅವರು ಬೇಡವೆಂದು ಫಲಿತಾಂಶವೇ ಹೇಳಿದೆ. ಆದರೂ, ಕೆಲ ಪಕ್ಷಗಳ ಸಹಕಾರ ಪಡೆದುಕೊಂಡು ಅಧಿಕಾರಕ್ಕೆ ಏರಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಕೊಂಡೆ ಬರುತ್ತಿದೆ. ಜಿಎಸ್‍ಟಿ ಪಾಲು ಕೊಡುವುದರಿಂದ ಹಿಡಿದು ಎಲ್ಲದರಲ್ಲೂ ತಾರತಮ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನರು ಇನ್ನಷ್ಟು ಪಾಠ ಕಲಿಸಲಿದ್ದಾರೆ ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.