ಕ್ಯಾನ್ಸರ್ ಪೀಡಿತ ಗಾಯಕ್ವಾಡ್‌ಗೆ ಕಪಿಲ್‌ದೇವ್ ನೆರವಿನಹಸ್ತ
ಹೊಸದಿಲ್ಲಿ.ಜು.೧೩- ಟೀಮ್ ಇಂಡಿಯಾದ ಮಾಜಿ ಆಟಗಾರ ಅನ್ಶುಮಾನ್ ಗಾಯಕ್ವಾಡ್ ಅವರು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು,ಅವರಿಗೆ ಆರ್ಥಿಕ ನೆರವು ನೀಡಲು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮುಂದಾಗಿದ್ದಾರೆ. ಮಾಜಿ ಆಟಗಾರ ಚಿಕಿತ್ಸೆಗಾಗಿ ಸಹಾಯಹಸ್ತವನ್ನು ಎದುರು ನೋಡುತ್ತಿದ್ದಾರೆ.
ಈ ಬಗ್ಗೆ ಬಿಸಿಸಿಐ ಗಮನ ಸೆಳೆದಿರುವ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಕಳೆದ ಕೆಲ ದಿನಗಳಿಂದ ಮನವಿ ಮಾಡುತ್ತಿದ್ದಾರೆ. ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿಲ್ಲ. ಇದರಿಂದ ಬೇಸರಗೊಂಡಿರುವ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅನ್ಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಇದು ದುಃಖಕರ ವಿಷಯ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ನಾನು ಅಂಶು ಜೊತೆಯಲ್ಲಿ ಆಡಿರುವ ಕಾರಣ ನಾನು ನೋವಿನಲ್ಲಿದ್ದೇನೆ. ಆತನನ್ನು ಈ ಸ್ಥಿತಿಯಲ್ಲಿ ಅವರನ್ನು ನೋಡಲು ಆಗುತ್ತಿಲ್ಲ. ಯಾರೂ ಸಹ ತೊಂದರೆ ಅನುಭವಿಸಬಾರದು ಎಂಬುದು ನನ್ನ ಭಾವನೆ. ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇನೆ. ಭಾರತೀಯ ಕ್ರಿಕೆಟ್ ಮಂಡಳಿ ಅವರ ಪರ ನಿಲ್ಲಬೇಕು ಎಂದು ಕಪಿಲ್ ದೇವ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದಕ್ಕಾಗಿ ತಮ್ಮ ಪಿಂಚಣಿ ಹಣವನ್ನು ನೀಡಲು ನಾನಂತು ಸಿದ್ಧನಿದ್ದೇನೆ. ಆದರೆ ಯಾರನ್ನೂ ಒತ್ತಾಯಿಸುವುದಿಲ್ಲ. ಅನ್ಶುಗೆ ಯಾವುದೇ ಸಹಾಯವು ನಿಮ್ಮ ಹೃದಯದಿಂದ ಬರಬೇಕು. ಈಗ ನಾವು ಅವನ ಪರವಾಗಿ ನಿಲ್ಲುವ ಸಮಯ. ನಮ್ಮ ಕ್ರಿಕೆಟ್ ಅಭಿಮಾನಿಗಳು ಅವರನ್ನು ಕೈ ಬಿಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರ ಚೇತರಿಕೆಗಾಗಿ ನೀವೆಲ್ಲರೂ ಪ್ರಾರ್ಥಿಸಬೇಕು ಎಂದು ಕಪಿಲ್ ದೇವ್ ಕೇಳಿಕೊಂಡಿದ್ದಾರೆ.
ಅಂಶುಮಾನ್ ಗಾಯಕ್ವಾಡ್ ಅವರು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರವನ್ನು ಮಾಜಿ ಸಹ ಆಟಗಾರ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದರು. ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಹಣಕಾಸಿನ ನೆರವಿನ ಅಗತ್ಯತೆ ಇದ್ದು, ಬಿಸಿಸಿಐ ಕಡೆಯಿಂದ ನೆರವು ನೀಡಬೇಕೆಂದು ತಿಳಿಸಿದ್ದರು.
ಆದರೆ ಸಂದೀಪ್ ಪಾಟೀಲ್ ಈ ಮನವಿ ಮಾಡಿ ವಾರಗಳೇ ಕಳೆದರೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಪಿಲ್ ದೇವ್, ಬಿಸಿಸಿಐ ಭಾರತ ತಂಡಕ್ಕಾಗಿ ಸೇವೆ ಸಲ್ಲಿಸಿದವರನ್ನು ನೋಡಿಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದಿದ್ದಾರೆ. ನೆರವಿಗೆ ನಿಲ್ಲುವಂತೆ ಭಾರತ ತಂಡದ ಮಾಜಿ ಆಟಗಾರರು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಮನವಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಹೇಗೆ ನೆರವಿಗೆ ನಿಲ್ಲುತ್ತದೆಯೋ ಅನ್ನೋದನ್ನು ಕಾದು ನೋಡಬೇಕಿದೆ.