ಜೂ. ೪ ಮೋದಿ ಮುಕ್ತಿ ದಿವಸ ಆಚರಿಸಬೇಕುಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ನವದೆಹಲಿ,ಜು.೧೩:ಪ್ರತಿವರ್ಷ ಜೂ.೨೫ ಸಂವಿಧಾನ ಹತ್ಯೆಯ ದಿನ ಆಚರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಜೂ. ೪ ರಂದು ಮೋದಿ ಮುಕ್ತ ದಿವಸ್ ಆಚರಿಸಬೇಕು ಎಂದು ತಿರುಗೇಟು ನೀಡಿದೆ.
ನಿನ್ನೆಯಷ್ಟೇ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಸಂವಿಧಾನ ಹತ್ಯೆಯ ದಿನ ಆಚರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು.
ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್ ೨೦೧೪ರ ಜೂ. ೪ ರಂದು ಭಾರತದ ಜನರು ನಿರ್ಣಾಯಕ, ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ನೀಡಿದ್ದಾರೆ. ಈ ದಿನ ಇತಿಹಾಸದಲ್ಲೇ ಮೋದಿ ಮುಕ್ತ ದಿವಸ್ ಎಂದು ದಾಖಲಾಗುತ್ತದೆ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಹಾಗೂ ಸಮಸ್ಯೆಗಳನ್ನು ವ್ಯವಸ್ಥಿತ ದಾಳಿಗೆ ಒಳಪಡಿಸಿದ ಅಜೈವಿಕ ಪ್ರಧಾನಿ ಮೋದಿ. ಮನಃಸ್ಮೃತಿಯಿಂದ ಸ್ಫೂರ್ತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ೧೯೪೯ರ ನವೆಂಬರ್‌ನಲ್ಲಿ ಭಾರತದ ಸಂವಿಧಾನವನ್ನು ತಿರಸ್ಕರಿಸಿದ್ದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಎಂದರೆ ಡೆಮೋ-ಕುರ್ಸಿ ಮಾತ್ರ ಎಂದು ಅವರು ಟೀಕಿಸಿದ್ದಾರೆ. ೨೦೧೬ ನ. ೮ ರಂದು ಮೋದಿ ಅವರು ನೋಟು ನಿಷೇಧ ಮಾಡಿದ ಭಾಷಣದ ವೀಡಿಯೊ ತುಣುಕನ್ನು ಹಂಚಿಕೊಂಡಿರುವ ರಮೇಶ್, ಇನ್ನು ಮುಂದೆ ಪ್ರತಿವರ್ಷ ನ. ೮ ರಂದು ಭಾರತದ ಜನ ಆಜೀವಿಕ ಹತ್ಯಾ ದಿವಸ್ (ಜೀವನ ಹತ್ಯೆಯ ದಿನ) ಆಚರಿಸುತ್ತಾರೆ. ಈ ಬಗ್ಗೆ ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆಯನ್ನು ಮಾಡಲಾಗುವುದೆಂದು ಮತ್ತೊಂದು ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಂವಿಧಾನ ಉಳಿಸಿ ಅಭಿಯಾನಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಜೂ. ೨೫ ರಂದು ಸಂವಿಧಾನದ ಹತ್ಯೆಯ ದಿನ ಆಚರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.