ಜೂ.25 : ಸಂವಿಧಾನ ಹತ್ಯಾ ದಿನ ಆಚರಣೆ:ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಪ್ರಕಟ
ನವದೆಹಲಿ,ಜು.12- ದೇಶದಲ್ಲಿ ಸಂವಿಧಾನ ಉಳಿಸಿ ಎಂದು ಕಾಂಗ್ರೆಸ್ ಸಂವಿಧಾನ ಪ್ರತಿ ಹಿಡಿದು ಎಲ್ಲೆಡೆ ಹೋರಾಟ ಮಾಡಿದ ಬೆನ್ಮಲ್ಲೇ ಕೇಂದ್ರ ಸರ್ಕಾರ, ತುರ್ತು ಪರಿಸ್ಥಿತಿ ವಿರೋದಿಸಲು ಪ್ರತಿ ವರ್ಷ ಜೂನ್ 25 ರನ್ನು ಇನ್ನು ಮುಂದೆ ” ಸಂವಿಧಾನ ಹತ್ಯಾ ದಿನ” ಆಚರಿಸಲು ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವಾಲಯ ಈ ಸಂಬಂದ ಅಧಿಸೂಚನೆ ಹೊರಡಿಸಿದ್ದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಜೂ.25 ಅನ್ನು ಸಂವಿಧಾನ ಹತ್ಯಾ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಮೂಲಕ ಬಿಜೆಪಿ ಸಂವಿಧಾನವನ್ನು ತಿರುಚಲು ಮುಂದಾಗಿದೆ ಎಂದು ಲೋಕಸಭೆ ಚುನಾವಣೆ ವೇಳೆ ಪ್ರಚಾರ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದೆ.
ಕರಾಳ ಅಧ್ಯಾಯ: ಪ್ರಧಾನಿ
ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿದ್ದು ದೇಶದ ಕರಾಳ ಅಧ್ಯಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಈ ಕುರಿತು ಟ್ಬಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ದಮನಿಸುವ ಧೋರಣೆ ಹೊಂದಿದ್ದ ಸರ್ಕಾರದಿಂದ ತೊಂದರೆ ಎದುರಿಸುತ್ತಿದ್ದರೂ ಪ್ರಜಾಪ್ರಭುತ್ವದ ಪುನಃಶ್ಚೇತನಕ್ಕಾಗಿ ಹೋರಾಡಿದ ಲಕ್ಷಾಂತರ ಜನರ ಸ್ಫೂರ್ತಿಗೆ ಗೌರವ ನೀಡಲು ಪ್ರತಿ ವರ್ಷ ಜೂನ್ 25ರಂದು ಸಂವಿಧಾನ ಹತ್ಯಾ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ
ವ್ಯಕ್ತಿಗತ ಸ್ವಾತಂತ್ರ್ಯದ ಜ್ವಾಲೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಅರಿವನ್ನು ದೇಶದ ಪ್ರತಿ ನಾಗರಿಕರಲ್ಲಿ ಜೀವಂತವಾಗಿಡಲು ಇದು ಸಹಕಾರಿಯಾಗಲಿದೆ, ಅಲ್ಲದೇ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಕಾಂಗ್ರೆಸ್ ನಂತಹ ಶಕ್ತಿಗಳನ್ನು ತಡೆಯಲು ನೆರವಾಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಧಾನಿಗೆ ಧನ್ಯವಾದ : ಜೆಪಿ ನಡ್ಡಾ
ಜೂನ್ 25 ಅನ್ನು ಸಂವಿಧಾನ ಹತ್ಯಾ ದಿನವನ್ನಾಗಿ ಘೋಷಣೆ ಮಾಡಿದ ಕ್ರಮಕ್ಕೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ನ ಸರ್ವಾಧಿಕಾರಿ ಮನಸ್ಥಿತಿಯ ವಿರುದ್ಧ ಹೋರಾಡಿ, ಹಿಂಸೆ ಅನುಭವಿಸಿ, ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಮಡಿದ ಎಲ್ಲ ಮಹಾಪುರುಷರ ತ್ಯಾಗ ಮತ್ತು ಹುತಾತ್ಮರನ್ನು ಸ್ಮರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.