ತಮಿಳುನಾಡಿಗೆ ಕಾವೇರಿ ನೀರು ಆದೇಶ ಹಿನ್ನೆಲೆ: ಜು.14 ಸರ್ವಪಕ್ಷ ಸಭೆ
ಬೆಂಗಳೂರು, ಜುಲೈ 12: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಆದೇಶದ ನೀಡಿದೆ. ಮುಂದೆ ಅನುಸರಿಸಬೇಕಾದ ಮುಂದಿ ನಡೆ ಕುರಿತು ನಾಳೆ (ಜು.14)ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಬಾರಿ ವಾಡಿಕೆಗಿಂತ ಮಳೆ ಬೀಳುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದುವರೆಗೆ ಶೇ. 28 ರಷ್ಟು ಒಳಹರಿವಿನ ಕೊರತೆ ಇದೆ. ಈ ಅಂಶವನ್ನು ಸಿಡಬ್ಲ್ಯುಆರ್ ಸಿ ಗಮನಕ್ಕೆ ತಂದಿದ್ದೆವು‌. ಜುಲೈ ಅಂತ್ಯದ ವರೆಗೆ ಯಾವುದೇ ತೀರ್ಮಾನ ಮಾಡದಂತೆ ಮನವಿ ಮಾಡಿದ್ದೆವು. ಆದರೂ ಸಿಡಬ್ಲ್ಯು ಆರ್ ಸಿ ಜುಲೈ 12 ರಿಂದ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಿದ ಅವರು, ಜುಲೈ 14 ರಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಲಾಯಿತು. ಕರ್ನಾಟಕದ ನೀರಿನ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಟ್ಟಾಗಿದ್ದೇವೆ. ಆದ್ದರಿಂದ ಸರ್ವಪಕ್ಷ ಸಭೆ ನಡೆಸಲಾಗುವುದು ಎಂದರು.
ಕೇಂದ್ರ ಮಂತ್ರಿಗಳು, ಕಾವೇರಿ ಭಾಗದ ಲೋಕಸಭೆ, ರಾಜ್ಯಸಭೆ ಸದಸ್ಯರು ಮತ್ತು ಶಾಸಕರನ್ನು ಸಹ ಸಭೆಗೆ ಆಹ್ವಾನಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಮುಂದಿನ ಹೆಜ್ಜೆಯನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಬಿಳಿಗುಂಡ್ಲುವಿನಲ್ಲಿ ಅಳತೆ ಮಾಡುವಾಗ, ಕಬಿನಿ ಅಣೆಕಟ್ಟಿನ ಒಳಹರಿವಿನ ಕ್ಯೂಸೆಕ್ಸ್‌ ನೀರನ್ನು ತಮಿಳು ನಾಡಿಗೆ ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದ ಎಲ್ಲಾ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎoಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅoತ್ಯದವರೆಗೆ ಕಾಯಲು ಮನವಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.