ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ
ಮುಂಬೈ,ಜು.೧೨-ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಈ ಜೋಡಿ ಇಂದು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ಅಂದರೆ ೧೨-೧೫ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ. ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿ ಬಾಲ್ಯ ಸ್ನೇಹಿತರು. ಅನಂತ್ ಅಂಬಾನಿ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ.
ಅನಂತ್-ರಾಧಿಕಾ ಮದುವೆಗೂ ಮುನ್ನ ಗೃಹ ಶಾಂತಿ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಯಲ್ಲಿ ರಾಧಿಕಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಪೂಜಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಬಾನಿ ಮನೆ ಮದುವೆ ಸಂಭ್ರಮ ಈಗ ದೇಶಾದ್ಯಂತ ಹಾಟ್ ಟಾಪಿಕ್ ಆಗಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಇಂದು ಸೆಲೆಬ್ರಿಟಿಗಳ ನಡುವೆ ಅದ್ಧೂರಿಯಾಗಿ ನಡೆದಿದೆ. ಆದರೆ ಅಂಬಾನಿಗಳು ತಮ್ಮ ಮದುವೆಗೆ ಎಷ್ಟು ಖರ್ಚು ಮಾಡಿದ್ದಾರೆ? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಮದುವೆ ಸಮಾರಂಭಕ್ಕೆ ಅತಿರಥ ಮಹಾರಥರೂ ಬಂದಿದ್ದಾರೆ. ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಈಗಾಗಲೇ ಮುಂಬೈ ತಲುಪಿದ್ದಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಸ್ಯಾಮ್‌ಸಂಗ್ ಸಿಇಒ ಹಾನ್ ಜೊಂಗ್ ಹೀ ಸೇರಿದಂತೆ ಸಿನಿಮಾ ತಾರೆಯರಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್, ರಾಮ್ ಚರಣ್ ಈಗಾಗಲೇ ಮೂರು ದಿನಗಳ ಮೆಗಾ ಸಂಭ್ರಮಾಚರಣೆಗೆ ಮುಂಬೈಗೆ ಆಗಮಿಸಿದ್ದಾರೆ. ಈಗಾಗಲೇ ಇಡೀ ಮುಂಬೈ ನಗರವೇ ಈ ಮದುವೆಗೆ ಆಗಮಿಸುವ ಅತಿಥಿಗಳಿಂದ ತುಂಬಿದೆ. ಇಂದು ಈ ಮದುವೆಯ ಪ್ರಮುಖ ಕಾರ್ಯಕ್ರಮವಾದ ‘ಶುಭ ವಿವಾಹ’ ದೊಂದಿಗೆ ಈ ಆಚರಣೆಗಳು ಪ್ರಾರಂಭವಾಗುತ್ತವೆ.. ೧೩ ರಂದು ‘ಶುಭ ಆಶೀರ್ವಾದ’ ಮತ್ತು ೧೪ ರಂದು ‘ಮಂಗಲ ಉತ್ಸವ’ ದೊಂದಿಗೆ ಮುಕ್ತಾಯಗೊಳ್ಳಲಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ೫,೦೦೦ ಕೋಟಿ ರೂಪಾಯಿ ವೆಚ್ಚವಾಗಿದೆ ಎಂಬ ಪೋಸ್ಟ್ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. ಇದು ಮುಖೇಶ್ ಅಂಬಾನಿ ಅವರ ಆಸ್ತಿಯ ಮೌಲ್ಯದ ಕೇವಲ ೦.೫ ಪ್ರತಿಶತ ಎಂದು ಪೋಸ್ಟ್ ಹೇಳಿದೆ. ಈ ಪೋಸ್ಟ್ ಹಾಕಿರುವ ನೆಟಿಜನ್‌ಗಳು ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ.