ಅಪರಂಜಿ ಕಂಠದ ಅಪರ್ಣಾ ಇನ್ನಿಲ್ಲ; ಬಾಡಿದ ಮಸಣದ ಹೂವು
ಬೆಂಗಳೂರು: ನಾಡು ಕಂಡ ಅದ್ಭುತ ಕಂಠಸಿರಿಯ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಬನಶಂಕರಿ ನಿವಾಸದಲ್ಲಿ ಪತಿ ಜೊತೆ ವಾಸಿಸುತ್ತಿದ್ದ ಅಪರ್ಣಾ ಕಳೆದ ಮಂಗಳವಾರ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ 9:10ರ ಸುಮಾರಿಗೆ ಅಪರ್ಣಾ ನಿಧನರಾಗಿದ್ದಾರೆ.
ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣಾ ಕನ್ನಡ ಕುಲಕೋಟಿಗೆ ಹತ್ತಿರವಾಗಿದ್ದು ತಮ್ಮ ಸುಮಧುರ ಮಾತುಗಳಿಂದ. ಯಾವುದಾದರೂ ಕಾರ್ಯಕ್ರಮವನ್ನು ಅಪರ್ಣಾ ನಿರೂಪಣೆ ಮಾಡುತ್ತಿದ್ದಾರೆ ಎಂದರೆ, ಅಲ್ಲಿ ಕನ್ನಡ ಪದಗಳು ನಲಿದಾಡುತ್ತಿದ್ದವು. ಕನ್ನಡ ಮನಸ್ಸುಗಳನ್ನು ತಮ್ಮ ಮಾತುಗಳಿಂದಲೇ ಆಕರ್ಷಿಸಿದ್ದ ಧ್ವನಿ ಅಪರ್ಣಾ ಅವರದ್ದು. ನಮ್ಮ ಮೆಟ್ರೋ ಸೇರಿದಂತೆ ಅನೇಕ ಕಡೆ ಬರುವ ಅನೌನ್ಸ್‌ಮೆಂಟ್ ಅಪರ್ಣಾರದ್ದು. ನಿರೂಪಣೆಗೆ ಹೊಸ ಮೆರುಗು ತಂದುಕೊಟ್ಟಿದ್ದ ಅಪರ್ಣಾ ಇನ್ನು ನೆನಪು ಮಾತ್ರ.
ಪುಟ್ಟಣ್ಣ ಕಣಗಾಲ್ ಅವರ ‘ಮಸಣದ ಹೂವು’ ಸಿನೆಮಾದ ಮೂಲಕ 1984ರಲ್ಲಿ ಬೆಳ್ಳಿತೆರೆಗೂ ಪದಾರ್ಪಣೆ ಮಾಡಿದರು. ಈ ಸಿನೆಮಾದ ಪಾರ್ವತಿ ಪಾತ್ರ ಜನಪ್ರಿಯತೆ ಪಡೆದಿತ್ತು. ಆನಂತರ ಇನ್ಸ್‌ಪೆಕ್ಟ‌ರ್ ವಿಕ್ರಮ್ ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಡಾಕ್ಟರ್ ಕೃಷ್ಣ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ತೆರೆಕಂಡ ‘ಗ್ರೇ ಗೇಮ್ಸ್’ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.
ನಿರೂಪಣೆಯಲ್ಲಿ ದಾಖಲೆ: 1998 ನಡೆದ ದೀಪಾವಳಿ ಕಾರ್ಯಕ್ರವೊಂದನ್ನು 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಧಾರಾವಾಹಿಗಳಲ್ಲಿ ಮುಕ್ತ ಮುಂತಾದ ನಟನೆ ಮಾಡಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನ ಸ್ಪರ್ಧೆಯಾಗಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು. 2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ‘ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ನೀಡಿದ್ದರು.
ವರಲಕ್ಷಿ ವಿದಾಯ: 2003ರಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಮೂಡಲ ಮನೆ’ಯಲ್ಲಿ ಅಪರ್ಣಾ ಬಣ್ಣ ಹಚ್ಚಿದ್ದರು. ಟಿ ಎನ್ ಸೀತಾರಾಮ್ ಅವರ ‘ಮುಕ್ತ’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ‘ಬಿಗ್ ಬಾಸ್ ಕನ್ನಡ’ ಮೊದಲ ಸೀಸನ್‌ನಲ್ಲಿ ಅಪರ್ಣಾ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ವಿಶೇಷ. ಆನಂತರ ‘ಮಜಾ ಟಾಕೀಸ್’ ಕಾಮಿಡಿ ಶೋನಲ್ಲಿ ಅಪರ್ಣಾ ಹಲವು ವರ್ಷಗಳ ಕಾಲ ಕಾಣಿಸಿಕೊಂಡರು.
ಕಾಡಿತ್ತು ಮಹಾಮಾರಿ ಕ್ಯಾನ್ಸರ್: ಅಪರ್ಣಾ ಇಹಲೋಕದ ವ್ಯಾಪಾರ ಮುಗಿಸಿ, ಸ್ವರ್ಗಸ್ಥಳಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸ‌ರ್ ಬಾಧಿಸಿತ್ತು. ಇದೀಗ ಇಹಲೋಕ ತ್ಯಜಿಸಿದ್ದಾಳೆ ಅತ್ಯಂತ ವಿಷಾದದಿಂದ ಈ ಮಾತನ್ನು ನಿಮ್ಮಗಳ ಎದುರು ಇಡುತ್ತಿದ್ದೇನೆ. ಬರುವ ಅಕ್ಟೋಬರ್‌ಗೆ ಅಪರ್ಣಾಗೆ 58 ವರ್ಷ ತುಂಬುತ್ತಿತ್ತು” ಎಂದು ಅಪರ್ಣಾ ಪತಿ ನಾಗರಾಜ್ ವಸ್ತಾರೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹೊಯ್ಸಳ ಕರ್ನಾಟಕ ಭಾಗದ ಆಚರಣೆಯಂತೆ ಸ್ಮಾರ್ಥ ಸಂಪ್ರದಾಯದ ಪ್ರಕಾರ ನಡೆಯಲಿರುವ ಅಪರ್ಣಾ ಅಂತ್ಯಕ್ರಿಯೆ ನಡೆಯಲಿದೆ. ಬನಶಂಕರಿಯಲ್ಲಿರುವ ಅಪರ್ಣಾ ಸ್ವಗೃಹದಲ್ಲೇ ಮಧ್ಯಾಹ್ನ 11:30ರಿಂದ 12 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 1ಗಂಟೆ ನಂತರ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.