ಪಾಲಿಕೆಯಿಂದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ
ಬೆಂಗಳೂರು, ಜು.೧೧-ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಬಿಬಿಎಂಪಿ ಮುಂದಾಗಿದ್ದು, ಈ ಸಂಬಂಧ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ ಅವರು, ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಸಂಬಂಧ ಆಯಾ ಇಲಾಖೆಗಳಿಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಸನಗಳ ವ್ಯವಸ್ಥೆ, ಯಾವ ದ್ವಾರಗಳಲ್ಲಿ ಯಾರಿಗೆ ಪ್ರವೇಶ ನೀಡಬೇಕು, ಪಾಕಿಂಗ್ ವ್ಯವಸ್ಥೆ, ಮಾರ್ಗ ಬದಲಾವಣೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲದಂತೆ ನೋಡಿಕೊಳ್ಳಬೇಕೆಂದು ಎಂದು ತಿಳಿಸಿದರು.
ಅದೇ ರೀತಿ, ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೈದಾನದಲ್ಲಿ ಶೌಚಾಲಯಗಳ ವ್ಯವಸ್ಥೆ, ಕಾರ್ಯಕ್ರಮದ ದಿನ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಹಾಗೂ ಭದ್ರತೆಯ ಹಿತದೃಷ್ಠಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಹೇಳಿದರು.
ಇನ್ನೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನಾಡಗೀತೆ, ರೈತ ಗೀತೆ ಹಾಡಲು ಸೂಕ್ತ ತಂಡವನ್ನು ಆಯ್ಕೆ ಮಾಡಬೇಕು. ಪ್ರಥಮ ಚಿಕಿತ್ಸೆ ವ್ಯವಸ್ಥೆಗಾಗಿ ಆಂಬುಲೆನ್ಸ್ ಜೊತೆಗೆ ಅಗತ್ಯ ಔಷಧಿ ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ.ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಡಾ.ಆರ್.ಎಲ್ ದೀಪಕ್, ಕರೀಗೌಡ, ಸ್ನೇಹಲ್, ವಿನೋತ್ ಪ್ರಿಯಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಸೇರಿದಂತೆ ಪ್ರಮುಖರಿದ್ದರು.