ರಾಹುಲ್ ವಿರುದ್ಧ ಹೇಳಿಕೆ: ಶಾಸಕ ಭರತ್‌ಶೆಟ್ಟಿಗೆ ನೋಟಿಸ್
(ಸಂಜೆವಾಣಿ ಪ್ರತಿನಿಧಿಯಿಂದ)
ಮಂಗಳೂರು,ಜು.೧೧:ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್‌ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ಬೆನ್ನಲ್ಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮೂರು ದಿನಗಳ ಒಳಗಾಗಿ ತನಿಖಾಧಿಕಾರಿ ಎದುರು ವಿಚಾರಣೆ ಎದುರಿಸುವಂತೆ ಕಾವೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರು ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರು ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಅನಿಲ್‌ಕುಮಾರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಭರತ್‌ಶೆಟ್ಟಿ ಮೇಲೆ ಭಾರತೀಯ ದಂಡ ಸಂಹಿತೆ ೩೫೧(೩), ೫೫೩ ಕಲಂನಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಹಿಂದೂ ವಿರೋಧಿ ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ಅವರನ್ನು ಪಾರ್ಲಿಮೆಂಟ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ೨ ಬಾರಿಸಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು.