ಡೆಂಗ್ಯೂ ಜ್ವರ ಏರಿಕೆ ಖಂಡಿಸಿ ಜನತಾ ಪಕ್ಷ ಪ್ರತಿಭಟನೆ
ಬೆಂಗಳೂರು, ಜು.೧೧- ರಾಜ್ಯ ಸರ್ಕಾರದ ಬೊಕ್ಕಸದಿಂದ ಸೊಳ್ಳೆ ನಿಯಂತ್ರಣ ಬಾಬ್ತು ದೊಡ್ಡ ಮಟ್ಟದಲ್ಲಿ ಖರ್ಚಾಗಿದ್ದರೂ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೊಳ್ಳೆ ಹೆಚ್ಚಾಗಿ, ಡೆಂಘಿ ಜ್ವರದ ಪ್ರಕರಣಗಳು ಭಾರೀ ಏರಿಕೆ ಆಗಿರುವುದನ್ನು ಖಂಡಿಸಿ ಜನತಾ ಪಕ್ಷದ ರಾಜ್ಯ ಘಟಕದ ಸದಸ್ಯರು, ಸೊಳ್ಳೆ ಪರದೆಯನ್ನು ಧರಿಸಿ ವಿನೂತನವಾಗಿ ಪ್ರತಿಭಟಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ನೇತೃತ್ವದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು, ಸದಸ್ಯರು, ಸೊಳ್ಳೆ ಪರದೆ ಧರಿಸಿ ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಸೊಳ್ಳೆ ನಿಯಂತ್ರಣ ಕಾಮಗಾರಿಯಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಪೂರ್ಣ ವಿಫಲರಾಗಿದ್ದಾರೆ.ಅಲ್ಲದೆ, ಈಗಾಗಲೇ ಸರ್ಕಾರದ ಬೊಕ್ಕಸದಿಂದ ಸೊಳ್ಳೆ ನಿಯಂತ್ರಣ ಬಾಬ್ತು ಬೃಹತ್ ಪ್ರಮಾಣದಲ್ಲಿ ಹಣ ಖರ್ಚಾಗಿದ್ದರೂ ಪ್ರಗತಿ ಸಾಧಿಸದಿರುವ ಬಗ್ಗೆ ತನಿಖೆ ಹಾಗೂ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿನ ಮಳೆ ಪರಿಣಾಮವಾಗಿ ರಸ್ತೆಗಳಲ್ಲಿ, ಮೋರಿಗಳಲ್ಲಿ, ಹಳೆಯ ಕಟ್ಟಡಗಳಲ್ಲಿ, ಮಾರುಕಟ್ಟೆಗಳಲ್ಲಿ, ತ್ಯಾಜ್ಯಸಂಗ್ರಹ ತಾಣಗಳಲ್ಲಿ ನೀರು ನಿಂತು ದುರ್ನಾತ ಹೊರಡುತ್ತಿರುವುದು ಒಂದು ಕಡೆಯಾದರೆ, ನಿಂತ ನೀರಿನಲ್ಲಿ ವೃದ್ಧಿಯಾದ ಸೊಳ್ಳೆಗಳ ಕಾಟ ಹೆಚ್ಚಾಗಿರುವುದು ಗೊತ್ತಾಗಿದೆ. ಡೆಂಘಿ ಹಾಗೂ ಝೀಕಾ ರೋಗಾಣುಗಳೂ ಈಗಾಗಲೇ ಜನರನ್ನು ಹೈರಾಣಾಗಿಸುತ್ತಿವೆ ಎಂದು ಹೇಳಿದರು.
ಪಾಲಿಕೆಯ ಉಸ್ತುವಾರಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ತನ್ನದೇ ಆದ ಕಾರ್ಯಸೂಚಿಗಳಿದ್ದು, ಇದಕ್ಕಾಗಿ ಪ್ರತಿವ? ಕೋಟ್ಯಾಂತರ ರೂಪಾಯಗಳನ್ನು ಖರ್ಚು ಮಾಡಲಾಗುತ್ತಿದೆ. ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಆಗಿಂದಾಗ್ಗೆ ಸಭೆಗಳನ್ನು ನಡೆಸುತ್ತಿದ್ದರೂ, ಇಂತಹ ಗಂಭೀರ ಹಾಗೂ ಸೂಕ್ಷ್ಮ ವಿಚಾರಗಳ ಬಗ್ಗೆ ಯಾವುದೇ ಚರ್ಚೆ-ತೀರ್ಮಾನಗಳು ನಡೆಯುತ್ತಿಲ್ಲ. ಇದರಿಂದಾಗಿ ಸೊಳ್ಳೆ ನಿಯಂತ್ರಣದಲ್ಲಿ ಪ್ರಗತಿ ಕಂಡುಬಂದಿರುವುದಿಲ್ಲ. ಇದಕ್ಕೆಲ್ಲ ಪಾಲಿಕೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಉದಾಸೀನವೇ ಕಾರಣವಾಗಿರುತ್ತದೆ ಎಂದು ಆರೋಪಿಸಿದರು.