ಭ್ರಷ್ಟರಿಗೆ ಲೋಕಾ ಇಕ್ಕಳ
(ಸಂಜೆವಾಣಿ ವಾರ್ತೆ)
ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾವಣಗೆರೆಯ ಎಜಿಓ ಉಮೇಶ್ ಅವರ ಮನೆ ಮೇಲೆ ದಾಳಿ ನಡೆಸಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿರುವುದು.
ಬೆಂಗಳೂರು,ಜು.೧೧:ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದು, ಇಂದು ಬೆಳ್ಳಂಬೆಳಿಗ್ಗೆಯೇ ೧೧ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳು ಸಂಪಾದಿಸಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ ೧೧ ಅಧಿಕಾರಿಗಳು ಹಾಗೂ ಇಬ್ಬರು ನಿವೃತ್ತ ಇಂಜಿನಿಯರ್‌ಗಳಿಗೆ ಸಂಬಂಧಿಸಿದ ಒಟ್ಟಾರೆ ೫೬ ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಿ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.
ಲೋಕಾಯುಕ್ತ ಪೊಲೀಸ್ ವಿಭಾಗದ ಎಸ್ಪಿಗಳೂ ಸೇರಿದಂತೆ ೧೦೦ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಭ್ರಷ್ಟರ ಸಂಪತ್ತನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿ ೯ ಜಿಲ್ಲೆಗಳ ೫೬ ಕಡೆಗಳಲ್ಲಿ ದಾಳಿ ನಡೆಸಿ,ಭ್ರಷ್ಟ ಅಧಿಕಾರಿ ಹಾಗೂ ನಿವೃತ್ತ ಅಧಿಕಾರಿಗಳನ್ನು ಬಲೆಗೆ ಕೆಡವಿ ಅಕ್ರಮ ಆಸ್ತಿಪಾಸ್ತಿಯ ದಾಖಲೆಗಳ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ.
ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್, ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯಿತಿಯೊಂದರ ಗ್ರೇಡ್-೧ ಕಾರ್ಯದರ್ಶಿ ಎನ್.ಎಂ. ಜಗದೀಶ್ ಅವರನ್ನು ಬಲೆಗೆ ಕೆಡವಿ ಅವರುಗಳ ಕಚೇರಿ, ಮನೆ, ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.ಧಾರವಾಡದಲ್ಲಿ ಎರಡು ಕಡೆ ಪಿಜಿಗಳನ್ನು ಹೊಂದಿರುವ ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.ಧಾರವಾಡದಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿ ಶೇಖರಗೌಡರ ಪಿಜಿಗಳಿದ್ದು, ಎರಡೂ ಸ್ಥಳಗಳಲ್ಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ರಾಮನಗರದಲ್ಲಿ ದಾಳಿ:
ಜಿಲ್ಲೆಯ ಆರೋಹಳ್ಳಿ ತಹಶೀಲ್ದಾರ್ ವಿಜಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗು ತುಮಕೂರಿನ ತಲಾ ಎರಡು ಸ್ಥಳಗಳು, ರಾಮನಗರದ ಆರೋಹಳ್ಳಿ ಹಾಗೂ ಮಂಡ್ಯದ ಒಂದೆಡೆ ದಾಳಿ ನಡೆಸಲಾಗಿದೆ. ವಿಜಯಣ್ಣ ಈ ಮೊದಲು ಕೋಲಾರ ತಹಶೀಲ್ದಾರ್ ಆಗಿದ್ದರು. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕಲಬುರಗಿಯಲ್ಲಿ ದಾಳಿ:
ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಬೆಂಗಳೂರು ಹಾಗು ಕಲಬುರಗಿಯ ಎಂ.ಬಿ.ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.ಬೆಳಗಾವಿಯ ಜಿಲ್ಲಾ ಪಂಚಾಯತಿ ಎಇಇ ದುರದುಂಡೇಶ್ವರ ಬನ್ನೂರ ಅವರಿಗೆ ಸೇರಿದ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಗೋಕಾಕ, ಹೊನಗಾ, ಹಿಂಡಲಗಾ ಹಾಗೂ ಯಳ್ಳೂರ ಸೇರಿ ೪ ಕಡೆ ದಾಳಿ ನಡೆದಿದೆ. ಗೋಕಾಕದ ನಿವಾಸ, ಹೊನಗಾ ಫಾರ್ಮ್ ಹೌಸ್, ಯಳ್ಳೂರು ಮನೆ ಹಿಂಡಲಗಾ ಅಪಾರ್ಟ್ ಮೆಂಟ್?ಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳು ಮಹಾದೇವ ಬನ್ನೂರ ಮೇಲೆ ದಾಳಿ ಮಾಡಿದ್ದರು. ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು.
ಮಂಡ್ಯದಲ್ಲಿ ಪರಿಶೀಲನೆ:
ನಗರದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಎಸ್‌ಪಿ ಸುರೇಶ್ ಬಾಬು ನೇತೃತ್ವದ ತಂಡ ನಗರ ಸೇರಿದಂತೆ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ಫಾರ್ಮ್‌ಹೌಸ್, ಕ್ರಷರ್ ಹಾಗೂ ಮೈಸೂರಿನ ಶಿವರಾಜು ಅಳಿಯನ ಮನೆ ಸೇರಿದಂತೆ ವಿವಿಧೆಡೆ ಪರಿಶೀಲನೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆಯಲ್ಲೂ ದಾಳಿ
ದಾವಣಗೆರೆ ವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ಡಿ.ಎಚ್.ಉಮೇಶ್ ಹಾಗೂ ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಲಂಚಗುಳಿತನ, ಭ್ರಷ್ಟ ಆಡಳಿತ ನಡೆಸಿ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಗುಪ್ತಮಾಹಿತಿ, ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಖಡಕ್ ಆಫೀಸರ್ ಲೋಕಾಯುಕ್ತ ಕೌಲಾಪುರೇ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಈ ಅಧಿಕಾರಿಗಳು ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ರಮ ಆಸ್ತಿ ಮಾಡಿದ್ದು, ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ತಪಾಸಣೆ ನಡೆಸಿದರು.
ಬಲೆಗೆ ಬಿದ್ದ ಭ್ರಷ್ಟರು
*ವಿಜಯಣ್ಣ
ತಹಶೀಲ್ದಾರ್ ಕೋಲಾರ
*ಎಂ.ರವೀಂದ್ರ
ನಿವೃತ್ತ ಮುಖ್ಯ ಎಂಜಿನಿಯರ್
ಸಣ್ಣ ನೀರಾವರಿ ಇಲಾಖೆ
*ಮಹೇಶ್ ಕೆ.
ಸೂಪರಿಂಟೆಂಡಿಂಗ್ ಎಂಜಿನಿಯರ್
ಜಲ ಸಂಪನ್ಮೂಲ ಇಲಾಖೆ ಮೈಸೂರು
*ಕೆ.ಜಿ. ಜಗದೀಶ್,
ಸೂಪರಿಂಟೆಂಡಿಂಗ್ ಎಂಜಿನಿಯರ್
ಲೋಕೋಪಯೋಗಿ ಇಲಾಖೆ
*ಶೇಖರ್ ಗೌಡ
ಯೋಜನಾ ನಿರ್ದೇಶಕ
ನಿರ್ಮಿತಿ ಕೇಂದ್ರ ಧಾರವಾಡ
*ಶಿವರಾಜು ಎಸ್.
ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್
ಗ್ರಾಮೀಣ ಕುಡಿಯುವ ನೀರು ಪೂರೈಕೆ
*ಬಸವರಾಜ ಮಾಗಿ
ಕಂದಾಯ ಅಧಿಕಾರಿ ಬಿಬಿಎಂಪಿ ಕೆಂಗೇರಿ ವಲಯ
*ಡಿ.ಎಚ್. ಉಮೇಶ್
ಕಾರ್ಯನಿರ್ವಾಹಕ ಎಂಜಿನಿಯರ್
*ಎಂ.ಎಸ್, ಪ್ರಭಾಕರ,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೆಳಗಾವಿ
ಮಹದೇವ್ ಬೆನ್ನೂರು
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಎನ್.ಎಂ. ಜಗದೀಶ್
ಗ್ರಾಮ ಪಂಚಾಯಿತಿಯೊಂದರ ಗ್ರೇಡ್-೧ ಕಾರ್ಯದರ್ಶಿ ಹಾಸನ