೧,೧೧೫ ವಸ್ತು ಗುರುತಿಸಿದ ಮನಸ್ಮಿತ ನೋಬೆಲ್ ದಾಖಲೆಗೆ ಭಾಜನ
ಬೆಂಗಳೂರು, ಜು.೧೦- ಬರೋಬ್ಬರಿ ೧೧೧೫ ವಸ್ತುಗಳನ್ನು ಗುರುತಿಸಿದ ವಿಶ್ವದ ಮೊಟ್ಟ ಮೊದಲ ಮಗು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ ಮನಸ್ಮಿತ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ ೩೩೬ ವಿವಿಧ ವಸ್ತುಗಳು, ೫೦೦ ಪದಗಳನ್ನು ಗುರುತಿಸಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಇವರನ್ನು ಅಸಾಧಾರಣ ಗ್ರಹಣಶಕ್ತಿ ಮೇಧಾವಿ ಎಂದು ತಮ್ಮ ಪುಸ್ತಕದಲ್ಲಿ ನೊಂದಾಯಿಸಿ ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತ್ತು.
ಇದೀಗ ಮನಸ್ಮಿತ ಕೇವಲ ೧೫ ತಿಂಗಳಿಗೆ ೧೧೧೫ ವಸ್ತುಗಳನ್ನು ಗುರುತಿಸಿ ನೊಬೆಲ್ ವಿಶ್ವ ದಾಖಲೆಯ ಎಲ್ಲಾ ದಾಖಲೆಗಳನ್ನು ಮುರಿದು ೧೧೧೫ ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆ, ಕರ್ನಾಟಕದ ೮ ಜ್ಞಾನಪೀಠ ಪ್ರಶಸ್ತಿ ವಿಜೇತರು, ೨೭ ಹಣ್ಣುಗಳು, ೧೨ ಆಕಾರಗಳು, ೩೨ ಕಾಡು ಪ್ರಾಣಿಗಳು, ೨೦ ಸಾಕುಪ್ರಾಣಿಗಳು, ೨೭ ಪಕ್ಷಿಗಳು, ೨೭ ತರಕಾರಿಗಳು, ೨೧ ಹೂವುಗಳು, ೨೯ ಕಾಸ್ಮೆಟಿಕ್ಸ್, ೧೩೫ ಹೌಸ್ ಹೋಲ್ಡ್ ವಸ್ತುಗಳು, ೧೧ ಭಾರತೀಯ ಕರೆನ್ಸಿ, ೨೩ ಆಟಿಕೆಗಳ ಹೆಸರು ಸೇರಿದಂತೆ ಒಟ್ಟಾರೆ ೧೧೧೫ ವಸ್ತುಗಳನ್ನು ಗುರುತಿಸಿದ್ದಾರೆ.
ಮಗುವಿನ ತಾಯಿ ಡಿ. ಎಮ್. ಧನಲಕ್ಷ್ಮಿಕುಮಾರಿ ಗೃಹಿಣಿಯಾಗಿದ್ದು, ತಂದೆ ಕೆ.ಹುಲಿಯಪ್ಪಗೌಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.
ಕನ್ನಡ ಕಲಿಕೆ ಮತ್ತು ಅಸಾಧಾರಣ ಗ್ರಹಣ ಶಕ್ತಿ , ಅಮೋಘ ಜ್ಞಾನ ಮತ್ತು ವಿಶ್ವದಾದ್ಯಂತ ಕನ್ನಡ ನಾಡಿನ ಕೀರ್ತಿಯನ್ನು ಮೆರೆಸುತ್ತಿರುವ ಇವರ ಕೊಡುಗೆಯನ್ನು ಗುರುತಿಸಿ ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ (ನೋo) ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಮನಸ್ಮಿತಾಗೆ ರಾಜ್ಯಮಟ್ಟದ ಬನವಾಸಿ ಕನ್ನಡಿಗ ಪ್ರಶಸ್ತಿನೀಡಿ ಗೌರವಿರುವುದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.