ದರ್ಶನ್ ಕೈದಿ ನಂಬರ್ ಬರೆಸಿ ಆಟೋ ವ್ಹೀಲಿಂಗ್ ಚಾಲಕ ಸೆರೆ
ಬೆಂಗಳೂರು,ಜು.೧೦-ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ವಿಚಾರಣಾಧೀನ ಕೈದಿ ನಂಬರ್ ಅನ್ನು ಆಟೋ ಮೇಲೆ ಬರೆಸಿಕೊಂಡು ವ್ಹೀಲಿಂಗ್ ಮಾಡಿದ್ದ ಆಟೋ ಚಾಲಕನನ್ನು ಉತ್ತರ ವಿಭಾಗದ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡಕೂರಿನ
ಜಗದೀಶ್ ಬಂಧಿತ ಆಟೋ ಚಾಲಕನಾಗಿದ್ದು, ಈತ ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎಂದು ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.
ದರ್ಶನ್ ವಿಚಾರಣಾಧೀನ ಕೈದಿ ನಂಬರ್ ೬೧೦೬ ಅನ್ನು ಆಟೋ ಹಿಂದೆ ಬರೆಸಿಕೊಂಡು ವಾಟಾಳ್ ನಾಗರಾಜ್ ರಸ್ತೆಯ ಅಂಡರ್ ಪಾಸ್ ಬಳಿ ರಸ್ತೆಯ ಮಧ್ಯದಲ್ಲಿ ಜಗದೀಶ್ ಅಪಾಯಕಾರಿ ವ್ಹೀಲಿಂಗ್ ಮಾಡಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ.
ಅಪಾಯಕಾರಿ ವೀಡಿಯೋ ವೈರಲ್ ಆಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಾಚರಣೆ ಕೈಗೊಂಡ ಉತ್ತರದ ವಿಭಾಗದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಜಗದೀಶ್‌ನನ್ನು ಬಂಧಿಸಿ ವ್ಹೀಲಿಂಗ್ ಮಾಡಿದ್ದ ಆಟೋ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.