ವರ್ಷಧಾರೆಗೆ ಉತ್ತರ ಕನ್ನಡ ತತ್ತರ
ಕಾರವಾರ.ಜು.೯- ಕರಾವಳಿಯಲ್ಲಿ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಗಳಾದ ಕಾರವಾರ, ಕುಮಟಾ ಹಾಗೂ ಕುಮಟಾ ತತ್ತರಿಸಿದೆ.
ಎಡಬಿಡದೆ ಸುರಿದ ಮಳೆ ಜಲಾಶಯ ತುಂಬಿದೆ. ಇನ್ನು ಮಳೆಯಲ್ಲಿ ಸಿಲುಕದ್ದ ೬೦ ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹೊನ್ನಾವರ, ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಿಂದ ಪ್ರವಾಹವಾಗಿದೆ. ಕುಮಟಾ ಪಟ್ಟಣದ ಊರುಕೇರಿ, ಕೆಳಗಿನಕೇರಿ, ಹರಿಜನ ಕೇರಿ, ಕೋನಳ್ಳಿ, ಗುಡ್ಡಿನಕಟ್ಟು ಸೇರಿದಂತೆ ಹಲವು ಭಾಗಗಳಲ್ಲಿ ಪ್ರವಾಹ ಬಂದಿದೆ. ಭಾರಿ ಮಳೆಯಿಂದ ಹಿರೆಕಟ್ಟು, ಬಡಗಣಿ ಹಳ್ಳ ಉಕ್ಕಿ ಹರಿಯುತ್ತಿವೆ. ಹೊನ್ನಾವರ ತಾಲೂಕಿನಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಶರಾವತಿ, ಗುಂಡಬಾಳ ನದಿ ತೀರದ ಪ್ರದೇಶದಲ್ಲಿ ಪ್ರವಾಹವಾಗಿದ್ದು ಕಡತೋಕ, ಬಾಸ್ಕೇರಿ, ಹಾಡಗೇರಿ, ಹಡಿನಬಾಳ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ. ಭಾರಿ ಮಳೆ, ಪ್ರವಾಹದಿಂದ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆಗಳು ನೀರುಪಾಲಾಗಿದ್ದು ರೈತರು ಕಂಗಾಲಾಗಿದ್ದಾರೆ.
ಹೊನ್ನಾವರ ಭಾಗದಲ್ಲಿ ಶರಾವತಿ ಹಾಗೂ ಗುಂಡಬಾಳ ನದಿಗೆ ಹೆಚ್ಚಿನ ನೀರು ಬಂದ ಕಾರಣ ತಾಲೂಕಿನ ಕಡತೋಕ ಗ್ರಾಮದ ಗುದ್ನಕಟ್ಟು ಗ್ರಾಮ ಜಲಾವೃತವಾಗಿ ಗ್ರಾಮದ ೬೦ ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಇದೇ ಭಾಗದಲ್ಲಿ ೧೩ ಮನೆಗಳು ಜಲಾವೃತಗೊಂಡಿವೆ.
ಭಾರಿ ಮಳೆಯಿಂದಾಗಿ ಕಾರವಾರದ ಕದ್ರಾ ಜಲಾಯಶ ಭರ್ತಿಯಾಗಿದೆ. ಡ್ಯಾಂ ಭರ್ತಿಯಿಂದಾಗಿ ಅಸ್ನೋಟಿ, ಹಳಗ ಪ್ರದೇಶ ಜಲಾವೃತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಸ್ವಲ್ಪ ಮಳೆ ಆರ್ಭಟ ಕಡಿಮೆಯಾಗಿದೆ.ಆದರೂ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಮಳೆ ಆರ್ಭಟ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದಲ್ಲದೇ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಬಹುದು. ಮಳೆ ಮತ್ತಷ್ಟು ಅನಾಹುತ ತಂದೊಡ್ಡುವ ಭಯ ಜನರನ್ನು ಕಾಡುತ್ತಿದೆ.