ಬಿಹಾರ ಸಿಡಿಲು ಬಡಿದು ೧೨ ಮಂದಿ ಬಲಿ
ಪಾಟ್ನಾ,ಜು.೯-ಬಿಹಾರದ ಸಿಡಿಲು ಬಡಿದು ೧೨ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿವಿಧ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕೋಸಿ, ಬಗಮತಿ, ಗಂಡಕ್, ಕಮಲಾ ಮತ್ತು ಅಥರ್ವ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ತಲುಪಿದೆ. ಕೋಸಿ ನದಿ ಕೆಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹೊಸ ಸಾವುನೋವುಗಳೊಂದಿಗೆ, ಕಳೆದ ೪೮ ಗಂಟೆಗಳಲ್ಲಿ ೨೨ ಜನರು ಸಾವನ್ನಪ್ಪಿದ್ದಾರೆ. ಕಳೆದ ೧೦ ದಿನಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು ೪೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂತಾಪ ಸೂಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೃತರ ಕುಟುಂಬಗಳಿಗೆ ೪ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಗುಡುಗು ಸಹಿತ ಮಳೆಯ ಸಮಯದಲ್ಲಿ ಜನರು ಜಾಗರೂಕರಾಗಿರಿ ಮತ್ತು ಮನೆಯೊಳಗೆ ಇರುವಂತೆ ಅವರು ಮನವಿ ಮಾಡಲಾಗಿದೆ.
ಇಂದು ಬಿಹಾರ ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜಮುಯಿ ಮತ್ತು ಕೈಮೂರ್‌ನಲ್ಲಿ ತಲಾ ಮೂರು, ರೋಹ್‌ದಾಸ್‌ನಲ್ಲಿ ಎರಡು ಮತ್ತು ಸಹರ್ಸಾ, ಸರನ್, ಭೋಜ್‌ಪುರ ಮತ್ತು ಗೋಪಾಲ್‌ಗಂಜ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.