ಅಳಿಯನಿಗೆ ಮಕ್ಕಳಾಗದ ಕೊರಗಿತ್ತು: ಬಿ.ಸಿ.ಪಾಟೀಲ್- ನಾಳೆ ಅಂತ್ಯಕ್ರಿಯೆ
ಶಿವಮೊಗ್ಗ, ಜು.8- ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಅಳಿಯನಿಗೆ ಕೊರಗಿತ್ತು ಎಂದು ಮಾಜಿ ಸಚಿವ ಬಿಸಿ ಪಾಟೀಲ್‌ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 16 ವರ್ಷದ ಹಿಂದೆ ನಾನು ಪುತ್ರಿಯನ್ನು ಅವರಿಗೆ ಮದುವೆ ಮಾಡಿಕೊಟ್ಟಿದ್ದೆ. ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ನಾಳೆ ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದರು.
ನನ್ನ ಮಗಳು ಸೌಮ್ಯ ಜೊತೆ 2008ರಲ್ಲಿ ಮದುವೆ ನಡೆದಿತ್ತು. ನಮ್ಮ ಜೊತೆಯಲ್ಲೇ ಇದ್ದ ಪ್ರತಾಪ್ ನಮ್ಮ ಎಲ್ಲಾ ವ್ಯವಹಾರಗಳನ್ನು ಪ್ರತಾಪ್ ನೋಡಿಕೊಳ್ಳುತ್ತಿದ್ದರು. ಇಂದು ಬೆಳಿಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾಗಿ ವಿವರಿಸಿದರು.
ಮಧ್ಯಾಹ್ನ 1:45ರ ವೇಳೆಗೆ ಪ್ರತಾಪ್ ಸಹೋದರ ಪ್ರಭುದೇವ ಕರೆಮಾಡಿ, ಪ್ರತಾಪ್ ಏನಾದ್ರೂ ನಿಮಗೆ ಸಿಕ್ಕಿದ್ನಾ ಅಂತಾ ಕೇಳಿದ್ರು. ನನ್ನ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದಾರೆ ಅಂದೆ. ಅದೇನೋ ಮಾತ್ರೆ ತಗೊಂಡಿದ್ದಾನೆ ಅಂತ ಸುದ್ದಿಯಿದೆ. ಅವನ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಕೂಡಲೇ ಮೊಬೈಲ್‌ ಟ್ರ್ಯಾಕ್‌ ಮಾಡಿ ಎಂದು ಸಹೋದರ ಹೇಳಿದರು.
ಪ್ರತಾಪ್‌ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವು ಇತ್ತು. ಲಿವರ್‌ ಹೋಗಿತ್ತು. ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ಆದರೆ ಮತ್ತೆ ಕುಡಿತದ ಅ‍ಭ್ಯಾಸ ಶುರು ಮಾಡಿದ್ದರು. ನಾನು ಈ ರೀತಿ ಕುಡಿಯಬಾರದು ಎಂದು ಸಲಹೆ ಹೇಳಿದ್ದೆ. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರು ನೋಡಿಕೊಳ್ಳುತ್ತಿದ್ದರು ಎಂದು ಬಿಸಿ ಪಾಟೀಲ್‌ ಹೇಳಿದರು.