ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಕಾರಿನಲ್ಲೇ ಆತ್ಮಹತ್ಯೆ
ಬೆಂಗಳೂರು,ಜು.8- ಮಾಜಿ ಸಚಿವ,ಬಿಜೆಪಿಯ ಮುಖಂಡ ಬಿ.ಸಿ. ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್ ಕೆ.ಜಿ.ಅವರು ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪ್ರತಾಪ್ ಕುಮಾರ್
(41) ಮೃತಪಟ್ಟಿದ್ದಾರೆ.
ಮಾಜಿ ಸಚಿವ ಬಿ.ಸಿ. ಪಾಟೀಲ್‌ರ ಮೊದಲ ಪುತ್ರಿ ಸೌಮ್ಯಾ ಅವರ ಪತಿಯಾಗಿರುವ ಪ್ರತಾಪ್ ಕುಮಾರ್, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು‌ ಬಂದಿಲ್ಲ. ಅವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವಿದ್ದು, ಅಲ್ಲಿಗೆ ಕುಟುಂಬಸ್ಥರು, ಸಂಬಂಧಿಕರು ಧಾವಿಸಿದ್ದಾರೆ.
ಮೆಗ್ಗಾನ್‌ ಅಸ್ಪತ್ರೆಗೆ ಆಗಮಿಸಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು ಪೊಲೀಸರಿಂದ ಮಾಹಿತಿ ಪಡೆದು ಮಾತನಾಡಿ, ಪ್ರತಾಪ್ ಕಾಣೆಯಾದ ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ನಂತರ ಹೊನ್ನಾಳಿ-ಮಲೆಬೆನ್ನೂರು ರೋಡ್‌ನಲ್ಲಿ ವಿಷ ಸೇವಿಸಿದ್ದಾರೆ ಎಂದು ತಿಳಿಯಿತು.
ಮೊದಲು ದಾವಣಗೆರೆಗೆ ಶಿಫ್ಟ್ ಮಾಡಲು ಹೇಳಿದ್ದೆವು, ನಂತರ ಶಿವಮೊಗ್ಗ ಹತ್ತಿರ ಅಂತ ಇಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಶಿಕಾರಿಪುರ ಹತ್ತಿರ ಬಂದಾಗ ಜೀವ ಹೋಗಿದೆ ಎಂದು ತಿಳಿಸಿದರು.
ಮಕ್ಕಳ ವಿಚಾರದಲ್ಲಿ ಅವರಿಗೆ ಕೊರಗಿತ್ತು, ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲಾ ಅವರೇ ನೋಡಿಕೊಳ್ಳುತ್ತಿದ್ದರು. ಮದುವೆ ಆಗಿ 16 ವರ್ಷ ಆಗಿತ್ತು, ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಈಗ ಇಂತಹ ಘಟನೆ ನಡೆದಿದೆ. ನಾಳೆ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಿದರು.