ಬಸ್ ಪಲ್ಟಿ: ೪೦ ಮಂದಿಗೆ ಗಾಯ
ಪಂಚಕುಲ.ಜು.೮- ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ೪೦ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ. ಬಸ್‌ನಲ್ಲಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಪಂಚಕುಲದ ಪಿಂಜೋರ್‌ನ ನೌಲತಾ ಗ್ರಾಮದ ಬಳಿ ಇರುವ ಗುಡ್ಡಗಾಡು ಪ್ರದೇಶದಲ್ಲಿ ಹರ್ಯಾಣ ರೋಡ್‌ವೇಸ್ ಎಂಬ ಹೆಸರಿನ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ೪೦ಕ್ಕೂ ಹೆಚ್ಚು ಮಕ್ಕಳನ್ನು ಪಿಂಜೋರ್ ಆಸ್ಪತ್ರೆ ಮತ್ತು ಪಂಚಕುಲ ಸೆಕ್ಟರ್ ೬ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕ ವೇಗವಾಗಿ ಓಡಿಸುತ್ತಿದದ್ದೆ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಜತೆಗೆ ಬಸ್‌ನಲ್ಲಿ ಹೆಚ್ಚು ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಪಿಂಜೋರ್ ಗುಡ್ಡಗಾಡು ಪ್ರದೇಶವಾಗಿದ್ದು ಇಲ್ಲಿನ ರಸ್ತೆಗಳು ಅಂಕುಡೊಂಕಾಗಿವೆ.
ತುಂಬಿದ್ದ ಬಸ್‌ನಲ್ಲಿ ಸುಮಾರು ೭೦ ಮಕ್ಕಳು ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಘಟನೆ ಬಗ್ಗೆ ಸ್ಪಷ್ಟ ಕಾರಣ ಇನ್ನು ಹೊರಬರಬೇಕಿದ್ದು ತನಿಖೆಗೆ ಆದೇಶಿಸಲಾಗಿದೆ.