ಮುಡಾ ಹಗರಣ: ಎಸ್‌ಐಟಿ ತನಿಖೆ ಅಗತ್ಯವಿಲ್ಲ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೮:ಮುಡಾ ಪ್ರಕರಣದಲ್ಲಿ ಇಲಾಖೆ ತನಿಖೆ ನಡೆಯುತ್ತಿದೆ. ಆದ್ದರಿಂದ ಎಸ್‌ಐಟಿ ತನಿಖೆ ಅಗತ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸದಾಶಿವ ನಗರದ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಹುನ್ನಾರ ನಡೆಸಿದೆ ಎಂಬ ಬಿಜೆಪಿ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ. ಸದ್ಯದಲ್ಲೇ ಚಾರ್ಜ್‌ಶೀಟ್ ಹಾಕಲಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಗ್ಯಾರಂಟಿ ರದ್ಧತಿ ಕುರಿತು ಬಸನಗೌಡಪಾಟೀಲ್ ಯತ್ನಾಳ್ ಕೇಂದ್ರಕ್ಕೆ ಪತ್ರ ಬರೆದಿರುವ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಆಡಳಿತ ನಡೆಸಲು ಜನರು ನಮಗೆ ಅಧಿಕಾರ ನೀಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸಲು ಜನ ಎನ್‌ಡಿಎಗೆ ಅಧಿಕಾರ ನೀಡಿದ್ದಾರೆ. ಅವರು ಪತ್ರ ಬರೆದಿದ್ದಾರೆ. ಕೇಂದ್ರದಿಂದ ನಿರ್ದೇಶನ ಬರಲಿ ಆಮೇಲೆ ನೋಡೋಣ ಎಂದು ಹೇಳಿದರು.
ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಗ್ಯಾರಂಟಿ ಜಾರಿ ಮಾಡಿದ್ದೇವೆ. ಸಮಸ್ಯೆ ಎದುರಾದರೆ ಅದನ್ನು ಪರಿಹರಿಸುವ ಜವಾಬ್ದಾರಿಯೂ ನಮ್ಮದೆ. ೫೮ ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಬಿಜೆಪಿ ಸಲಹೆ ಅಗತ್ಯವಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಅಕ್ಕಿ ಖರೀದಿಗೆ ಸಂಬಂಧಿಸಿದಂರೆ ರಾಜ್ಯಸರ್ಕಾರದ ಬಳಿ ಹಣವಿಲ್ಲ ಎಂಬ ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಪತ್ರ ಬರೆಯಿರಿ ಸರ್ಕಾರ ಅವರ ಪತ್ರಕ್ಕೆ ಯಾವ ರೀತಿ ಸ್ಪಂದಿಸುತ್ತೇವೆ ಎಂದು ಅವರಿಗೆ ಗೊತ್ತಾಗಲಿದೆ ಎಂದರು.
ಸಿಎಂ-ಡಿಸಿಎಂ ವಿಚಾರವಾಗಿ ಬಾಯ್ಬಿಡದಂತೆ ಹೈಕಮಾಂಡ್‌ನಿಂದ ಸಂದೇಶ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇತ್ತೀಚೆಗೆ ದೆಹಲಿಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಹೈಕಮಾಂಡ್ ಆ ವಿಚಾರವಾಗಿ ಏನು ಮಾತಡಲೇ ಇಲ್ಲ. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನಮಗೆ ಶಹಬ್ಬಾಷ್ ಗಿರಿ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಿದರು.