ಜಲಾಶಯಗಳ ಒಳಹರಿವು ಇಳಿಕೆ!
ಶಿವಮೊಗ್ಗ, ಜು. ೬: ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದರೂ ಅಬ್ಬರ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ನೀರಿನ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.
ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು ೨೦,೪೨೦ ಕ್ಯೂಸೆಕ್ ಗೆ ಇಳಿಕೆಯಾಗಿದೆ. ೨೦೩೦ ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ ೧೭೬೪.೮ (ಗರಿಷ್ಠ ಮಟ್ಟ : ೧೮೧೯) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ ೧೭೪೪.೪ ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಡ್ಯಾಂನ ಒಳಹರಿವು ೭೭೩೬ ಕ್ಯೂಸೆಕ್ ಗೆ ಇಳಿಕೆಯಾಗಿದೆ. ೩೫೨ ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ ೧೩೦.೭ (ಗರಿಷ್ಠ ಮಟ್ಟ : ೧೮೬) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ ೧೩೮ ಅಡಿಯಿತ್ತು. ಉಳಿದಂತೆ ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ ೫೮೮.೨೪ ಮೀಟರ್ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು ೧೭,೨೮೯ ಕ್ಯೂಸೆಕ್ ಇದೆ. ೧೪,೬೬೨ ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ ಬಿಡಲಾಗುತ್ತಿದೆ.
ಮಳೆ ವಿವರ : ಶನಿವಾರ ಬೆಳಿಗ್ಗೆ ೮ ಗಂಟೆಗೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಶಿವಮೊಗ್ಗದಲ್ಲಿ ೧೦.೨೦ ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ ೫.೭೦ ಮಿ.ಮೀ., ತೀರ್ಥಹಳ್ಳಿ ೪೫.೮೦ ಮಿ.ಮೀ., ಸಾಗರ ೨೯.೧೦ ಮಿ.ಮೀ., ಶಿಕಾರಿಪುರ ೫.೨೦ ಮಿ.ಮೀ., ಸೊರಬ ೮ ಮಿ.ಮೀ ಹಾಗೂ ಹೊಸನಗರದಲ್ಲಿ ೪೨.೫೦ ಮಿ.ಮೀ,. ಮಳೆಯಾಗಿದೆ.
ಶನಿವಾರ ಕೂಡ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಮುಂದುವರಿದಿದೆ. ತಾಪಮಾನದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ತಣ್ಣನೆಯ ವಾತಾವರಣ ನೆಲೆಸಿದೆ. ಮುಂದಿನ ಕೆಲ ದಿನಗಳವರೆಗೆ ಜಿಲ್ಲೆಯಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.