ಕೇರಳ : ನಾಲ್ಕನೇ ಅಮೀಬಾ ಸೋಂಕು ಪತ್ತೆ
ತಿರುವನಂತಪುರಂ,ಜು.೬-ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ ೪ನೇ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.
ಅಮೀಬಾ ಮಾನವನ ಮೆದುಳನ್ನು ತಿಂದು ಹಾಕಿರುವ ಮತ್ತೊಂದು ಪ್ರಕರಣ ಕೇರಳದಿಂದ ವರದಿಯಾಗಿದೆ. ೧೪ ವರ್ಷದ ಬಾಲಕನಿಗೆ ಅಪರೂಪದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಇರುವುದು ಪತ್ತೆಯಾಗಿದೆ. ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಸ್ಪತ್ರೆ ಮೂಲಗಳ ಪ್ರಕಾರ, ಮೆದುಳಿನ ಸೋಂಕಿನಿಂದ ಬಳಲುತ್ತಿರುವ ಬಾಲಕ ಉತ್ತರ ಕೇರಳ ಜಿಲ್ಲೆಯ ಪಯ್ಯೋಲಿ ನಿವಾಸಿ. ಜುಲೈ ೧ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಸೋಂಕು ದೃಢಪಟ್ಟಿದೆ. ಈಗ ಬಾಲಕನಿಗೆ ವಿದೇಶಿ ಔಷಧಗಳನ್ನು ನೀಡಲಾಗಿದೆ.ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನಲಾಗಿದೆ .
ಮೇ ತಿಂಗಳಿನಿಂದ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ರೋಗಿಗಳು ಮಕ್ಕಳಾಗಿದ್ದು, ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದಾರೆ. ಸ್ವತಂತ್ರವಾಗಿ ಜೀವಿಸುವ ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಮೂಗಿನ ಮೂಲಕ ಕಲುಷಿತ ನೀರಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಈ ಸೋಂಕು ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ
ಮೊದಲ ಪ್ರಕರಣದಲ್ಲಿ ಮೇ ೨೧ ರಂದು ಮಲಪ್ಪುರಂನ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದರೆ, ಎರಡನೇ ಪ್ರಕರಣದಲ್ಲಿ ಜೂನ್ ೨೫ ರಂದು ಕಣ್ಣೂರಿನ ೧೩ ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಇತ್ತೀಚಿನ ಪ್ರಕರಣದಲ್ಲಿ, ಬಾಲಕ ಸ್ಥಳೀಯ ಕೊಳದಲ್ಲಿ ಸ್ನಾನ ಮಾಡಿದ್ದಾನೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ನೀರಿನಲ್ಲಿ ವಾಸಿಸುವ ಅಮೀಬಾವು ಸ್ನಾನ ಮಾಡುವಾಗ ಅಥವಾ ಆ ನೀರಿನಿಂದ ನೇರ ಸಂಪರ್ಕದ ಸಮಯದಲ್ಲಿ ಮೂಗಿನ ಮೂಲಕ ಮೆದುಳನ್ನು ಪ್ರವೇಶಿಸಬಹುದು. ಈ ಮಾರಣಾಂತಿಕ ಸೋಂಕಿಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಇದಕ್ಕೆ ಒಡ್ಡಿಕೊಂಡವರು ಸಾಯುವ ಸಾಧ್ಯತೆ ಹೆಚ್ಚು.