ಸ್ಪೈಸ್‌ಜೆಟ್ ವಿಮಾನ ೧೨ ಗಂಟೆ ವಿಳಂಬ ಪ್ರಯಾಣಿಕರ ಆಕ್ರೋಶ
ನವದೆಹಲಿ,ಜು.೬-ನಗರದಿಂದ ಬೆಂಗಳೂರಿಗೆ ನಿನ್ನೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನ ಸುಮಾರು ೧೨ ಗಂಟೆಗಳ ಕಾಲ ತಡವಾಗಿ ಇಂದು ಹೊರಟಿದ್ದು,ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಸ್ ಜಿ ೮೧೫೧ ಸ್ಪೈಸ್‌ಜೆಟ್ ವಿಮಾನ
ನಿನ್ನೆ ರಾತ್ರಿ ಸುಮಾರು ೭ ಗಂಟೆಗೆ ಹೊರಡಬೇಕಿದ್ದ ವಿಮಾನ ಇಂದು ಬೆಳಗ್ಗೆ ೬.೩೦ಕ್ಕೆ ಟೇಕಾಫ್ ಆಗಿದೆ.
ರಾತ್ರಿ ೭ ಗಂಟೆಗೆ ಹೊರಡಬೇಕಾಗಿದ್ದ ವಿಮಾನದಲ್ಲಿ ಪ್ರಯಾಣಿಸಲು ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರು ಕಾದು ಕುಳಿತಿದ್ದರು. ಕೊನೆಗೆ ತಡರಾತ್ರಿ ೧ ಗಂಟೆ ಸುಮಾರಿಗೆ ಅವರನ್ನು ವಿಮಾನಕ್ಕೆ ಹತ್ತಿಸಲಾಯಿತು. ಆದರೆ ವಿಮಾನ ಬೆಳಿಗ್ಗೆ ೬.೩೦ರ ತನಕ ಟೇಕಾಫ್ ಆಗಿರಲೇ ಇಲ್ಲ.
ಹೀಗಾಗಿ ಪ್ರಯಾಣಿಕರು ವಿಮಾನದಲ್ಲೇ ಅಕ್ಷರಶಃ ಬಂಧಿಗಳಾಗಿದ್ದರು. ಕೊನೆಗೆ ೬.೩೦ಕ್ಕೆ ಬೆಂಗಳೂರಿನತ್ತ ಹೊರಟಿತು ಎಂದು ಮೂಲಗಳು ತಿಳಿಸಿವೆ.
ವಿಡಿಯೊ ವೈರಲ್ :
ದೆಹಲಿ-ಬೆಂಗಳೂರು ವಿಮಾನ ಟೇಕ್ ಆಫ್ ವಿಳಂಬಕ್ಕೆ ಪ್ರತಿಕ್ರಿಯಿಸಿದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಪ್ರಯಾಣಿಕರನ್ನು ಕೆರಳಿಸಿತ್ತು. ಪೈಲಟ್ ಇಲ್ಲದ ಕಾರಣ ಟೇಕಾಫ್ ವಿಳಂಬವಾಗಿದೆ ಎಂದು ಅಧಿಕಾರಿಗಳು ಬೇಜಾವಬ್ದಾರಿಯುತ ಹೇಳಿಕೆ ನೀಡಿದ್ದರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿಕೊಂಡು ಒದ್ದಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಯಾಣಿಕರು ಹೇಗೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಮಾನ ನಿಲ್ದಾಣವನ್ನು ಮತ್ತು ವಿಮಾನಕ್ಕೆ ಸಂಪರ್ಕಿಸುವ ಗ್ಯಾಂಗ್ ವೇ ಪ್ರಯಾಣಿಕರಿಂದ ತುಂಬಿರುವುದನ್ನು ಕಾಣಬಹುದು.
ಪ್ರಯಾಣಿಕರ ಪರದಾಟ:
ವಿಮಾನದಲ್ಲೇ ೧೦೦ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದರು. ಹೀಗಾಗಿ ಅವರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಜತೆಗೆ ದೆಹಲಿ-ಗೋವಾಕ್ಕೆ ತೆರಳುವ ಸ್ಲೈಸ್‌ಜೆಟ್ ವಿಮಾನವೂ ಸುಮಾರು ೧೬ ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಸೋಷಿಯಲ್ ಮೀಡಿಯಾದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ ಸಿಬ್ಬಂದಿ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.