ಕೌಶಲ್ಯ ಗಣತಿ ಆರಂಭಕ್ಕೆ ಪ್ರಧಾನಿಗೆ ಚಂದ್ರಬಾಬು ಮನವಿ
ನವದೆಹಲಿ,ಜು.೬- ಇಂಡಿಯಾ ಮೈತ್ರಿಕೂಟದ ಪಕ್ಷಗಳು ದೇಶದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸುತ್ತಿರುವ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದಲ್ಲಿರುವ ಟಿಡಿಪಿ ಕೌಶಲ್ಯ ಗಣತಿ ಆರಂಭಿಸುವಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡ ಮನವಿ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಕೌಶಲ್ಯ ಗಣತಿ ಆರಂಭಿಸಲು ಮುಂದಾಗಿದ್ದು ಇದಕ್ಕೆ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಜನಸಂಖ್ಯೆಯೊಂದಿಗೆ ಲಭ್ಯವಿರುವ ಕೌಶಲ್ಯ ಗಣತಿ ನಕ್ಷೆ ಮಾಡಲು ಮತ್ತು ಮಾನವ ಬಂಡವಾಳ ಅಭಿವೃದ್ಧಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ರೀತಿಯ ಕೆಲಸ ಮಾಡಲು ಸಲಹೆ ನೀಡಿದ್ದಾರೆ.
ಜಾತಿ ಗಣತಿಗಾಗಿ ಒತ್ತಾಯಿಸುತ್ತಿರುವ ಇಂಡಿಯಾ ಮೈತ್ರಿಕೂಟದ ರಾಜ್ಯಗಳಿಗಿಂತ ಭಿನ್ನವಾಗಿ, ನಾಗರಿಕರಿಗೆ ಉತ್ತಮ ಫಲಿತಾಂಶಗಳನ್ನು ನೀಡಲು ಕೌಶಲ್ಯ ಗಣತಿ ಆರಂಭಿಸಲು “ಸಾರ್ವಜನಿಕ, ಖಾಸಗಿ, ಜನರ ಸಹಭಾಗಿತ್ವಕ್ಕೆ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದೂ ಸೇರಿದಂತೆ ವಿವಿಧ ಕ್ರಮಗಳಿಗೆ ಒತ್ತು ನೀಡುವಂತೆಯೂ ಪ್ರಧಾನಿ ಅವರಿಗೆ ಸಲಹೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಚಂದ್ರಬಾಬು ನಾಯ್ಡು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ಪ್ರಮುಖ ಮಿತ್ರ ಪಕ್ಷವಾಗಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ, ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ತೀವ್ರ ಆರ್ಥಿಕ ಒತ್ತಡದಲ್ಲಿ ರಾಜ್ಯವನ್ನು ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಭಿವೃದ್ಧಿ ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಪೋಲವರನ್ ನೀರಾವರಿ ಯೋಜನೆ ಮತ್ತು ಅಮರಾವತಿ ಹೊಸ ರಾಜ್ಯ ರಾಜಧಾನಿಯಾಗಿ ನಿರ್ಮಿಸುವ ಅವರ ಯೋಜನೆಗಳಿಗೆ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.
ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನಮ್ಮ ಉದ್ದೇಶ ಹೀಗಾಗಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಬಿಜೆಪಿ ಮತ್ತು ಮೈತ್ರಿಕೂಟದ ಪಾಲುದಾರರು ತಮ್ಮದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದರಿಂದ ತಮ್ಮ ಪಕ್ಷ ಯಾವುದೇ ಸ್ಥಾನ ಅಥವಾ ಸಾಮಾನ್ಯ ಕಾರ್ಯಸೂಚಿಗೆ ಬೇಡಿಕೆ ಸಲ್ಲಿಸಿಲ್ಲ ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲೂ ಕೇಂದ್ರದಿಂದ ಯಾವುದೇ ಸಚಿವ ಸ್ಥಾನವನ್ನು ಕೇಳಿಲ್ಲ, ಏನು ನೀಡಿದ್ದರೂ ನಾವು ಸ್ವೀಕರಿಸಿದ್ದೇವೆ. ವಾಜಪೇಯಿ ಕಾಲದಲ್ಲಿ ಮೈತ್ರಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು “ಮಾತ್ರ” ಲೋಕಸಭಾ ಸ್ಪೀಕರ್ ಸ್ಥಾನ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.