ರಾಮಮಂದಿರದಲ್ಲಿ ಅರ್ಚಕರಿಗೆ ವಸ್ತ್ರಸಂಹಿತೆ
ಅಯೋಧ್ಯೆ,ಜು.೪-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆದು ೬ ತಿಂಗಳು ಕಳೆದಿವೆ. ಪ್ರತಿದಿನ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸದ್ಯ ರಾಮಮಂದಿರ ಪ್ರತಿಷ್ಠಾನ ರಾಮ ಮಂದಿರದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಅದರಂತೆ ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ ಎಂದು ಘೋಷಿಸಲಾಗಿದೆ. ಈ ಡ್ರೆಸ್ ಕೋಡ್ ಪುರೋಹಿತರಿಗೆ ಅನ್ವಯಿಸುತ್ತದೆ. ದೇವಾಲಯದ ಅರ್ಚಕರು ಈಗ ಸಮವಸ್ತ್ರವನ್ನು ಧರಿಸಬೇಕು. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸುತ್ತಾರೆ ಎಂದು ವರದಿಯಾಗಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ೨೬ ಅರ್ಚಕರು ವಿವಿಧ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ ೨೧ ಅರ್ಚಕರನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರತಿಷ್ಠಾನವು ಅರ್ಚಕರಿಗೆ ಗುರುತಿನ ಚೀಟಿಯನ್ನೂ ನೀಡಿದೆ. ಅವರ ಆರು ತಿಂಗಳ ತರಬೇತಿ ಪ್ರಮಾಣಪತ್ರಗಳನ್ನು ಅವರ ನೇಮಕಾತಿ ಪತ್ರಗಳೊಂದಿಗೆ ಜುಲೈ ೫ ರಂದು ಹಸ್ತಾಂತರಿಸಲಾಗುವುದು ಎಂದು ವರದಿಯಾಗಿದೆ.
ಅದೇ ರೀತಿ ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುವವರಿಗೆ ಶೀಘ್ರವೇ ವಸ್ತ್ರ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಅಲ್ಲದೆ, ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ ಸೆಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅದರಲ್ಲೂ ಆಡ್ರಾಯ್ಡ್ ಸೆಲ್‌ಫೋನ್‌ಗಳೊಂದಿಗೆ ಅರ್ಚಕರು ದೇವಸ್ಥಾನಕ್ಕೆ ಬರುವುದನ್ನು ಟ್ರಸ್ಟ್ ನಿಷೇಧಿಸಿದೆ. ಅಗತ್ಯವಿದ್ದರೆ ಸಂವಹನಕ್ಕಾಗಿ ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕು ಎಂದು ಸಹ ಸೂಚಿಸಲಾಗಿದೆ.