ಕೋಚಿಮುಲ್ ನಿಂದ ಪ್ರತಿಲೀಟರ್ ಹಾಲಿಗೆ ೨ರೂ. ಕಡಿತ
ಬೆಂಗಳೂರು, ಜು.೫- ಒಂದೆಡೆ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಳ ಆಗುತ್ತಿದೆ. ಆದರೆ, ಮತ್ತೊಂದೆಡೆ, ರೈತರಿಂದ ಖರೀದಿಸುವ ಹಾಲಿನ ದರವನ್ನು ಇಂದಿನಿಂದ ಲೀಟರ್‌ಗೆ ೨ ಕಡಿತಗೊಳಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್) ಆದೇಶ ಹೊರಡಿಸಿದೆ.
ಈ ಆದೇಶ ಇಂದು ಬೆಳಗ್ಗೆಯಿಂದಲೇ ಜಾರಿಗೆ ಬರಲಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಹೈನುಗಾರರಿಗೆ ಆರ್ಥಿಕ ಹೊಡೆತ ಬೀಳಲಿದೆ.
ಇದುವರೆಗೆ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ೩೩.೪೦ ಹಾಗೂ ಸಂಘಗಳಿಗೆ ೩೫.೮೫ ಸಿಗುತಿತ್ತು.ಲೀಟರ್‌ಗೆ ೨ ಕಡಿಮೆ ಆಗಿರುವುದರಿಂದ ಇನ್ನು ಮುಂದೆ ರೈತರಿಗೆ ೩೧.೪೦ ಹಾಗೂ ಸಂಘಗಳಿಗೆ ೩೩.೮೫ ಸಿಗಲಿದೆ.
ಗುರುವಾರ ನಡೆದ ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಕ್ಕೂಟದ ಹಾಲು ಶೇಖರಣೆ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಿ ೨ ಕಡಿತಗೊಳಿಸಲಾಗಿದೆ.
ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವ ಕಾರಣ ದರ ಕಡಿಮೆ ಮಾಡುವುದು ಸಹಜ ಎಂದು ಕೋಚಿಮುಲ್ ಅಧಿಕಾರಿಗಳು ಸರ್ಮಥಿಸಿಕೊಂಡಿದ್ದಾರೆ. ಹಾಲಿನ ಪುಡಿ ದರ ಕಡಿಮೆಯಾಗಿದ್ದು, ಖರೀದಿಸುವವರೂ ಇಲ್ಲ. ಹೀಗಾಗಿ, ಹಾಲು ತಮ್ಮಲ್ಲೇ ಉಳಿಯುತ್ತಿದೆ ಎಂದಿದ್ದಾರೆ.
ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ವಿಚಾರವನ್ನು ಹಾಲು ಉತ್ಪಾದಕರಿಗೆ ಮನವರಿಕೆ ಮಾಡಬೇಕು. ಹಾಲು ಶೇಖರಣೆ ಮತ್ತು ಗುಣಮಟ್ಟ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಉಲ್ಲೇಖಿಸಿದರು.