ಹತ್ರಾಸ್ ಕಾಲ್ತುಳಿತ : ಸಂತ್ರಸ್ತರಿಗೆ ರಾಹುಲ್ ಸಾಂತ್ವನ
ಅಲಿಗಢ,ಜು.೫- ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಂತ್ವಾನ ಹೇಳಿದರು. ದೆಹಲಿಯಿಂದ ಹತ್ರಾಸ್‌ಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಹತ್ರಾಸ್‌ನಿಂದ ರಸ್ತೆ ಮೂಲಕ ಅಲಿಘರ್‍ನ ಪಿಲಾಖ್ನಾ ಗ್ರಾಮಕ್ಕೆ ಆಗಮಿಸಿ ಕಾಲ್ತುಳಿತದಿಂದ ಮೃತಪಟ್ಟ ಕುಟುಂಬದ ಸದಸ್ಯರನ್ನು ಭೇಟಿ ಮಾರಿ ಎಲ್ಲರಿಗೂ ಸಾಂತ್ವಾನ ಹೇಳಿ ಧೈರ್ಯ ತುಂಬಿದರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರ ಸುಪ್ರಿಯಾ ಶ್ರಿನಾಟೆ ಮತ್ತು ಇತರ ಪದಾಧಿಕಾರಿಗಳು ಜೊತೆಗಿದ್ದರು. ಕಾಲ್ತುಳಿತದಲ್ಲಿ ಕನಿಷ್ಠ ೧೨೧ಮಂದಿ ಮೃತಪಟ್ಟಿದ್ದರು ಅದರಲ್ಲಿ ೧೭ ಮಂದಿ ಅಲಿಗಢ ಮತ್ತು ೧೯ ಮಂದಿ ಹತ್ರಾಸ್‌ಗೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು
ರಾಜ್ಯ ಸರ್ಕಾರದ ವೈಫಲ್ಯ:
ಹತ್ರಾಸ್ ಘಟನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಸಾವು, ನೋವು ಸಂಭವಿಸುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹತ್ರಾಸ್‌ಗೆ ಭೇಟಿ ನೀಡಿದ್ದರು ಮತ್ತು ನಂತರ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಅಲ್ಲಿಗೆ ಹೋಗಿದ್ದರು ರಾಜ್ಯ ಸರ್ಕಾರದ ಆಂತರಿಕ ಕಚ್ಚಾಟಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ
೧ ಕೋಟಿ ಪರಿಹಾರಕ್ಕೆ ಒತ್ತಾಯ:
ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ೧ ಕೋಟಿ ರೂಪಾಯಿ ಮತ್ತು ಗಾಯಾಳುಗಳಿಗೆ ೨೫ ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ
ತನಿಖೆಗೆ ಒತ್ತಾಯ:
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮಾತನಾಡಿ ಹತ್ರಾಸ್ ಘಟನೆಯ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಬಯಸುತ್ತೇವೆ. ನಿವೃತ್ತ ನ್ಯಾಯಾಧೀಶರಲ್ಲ” ಎಂದು ರೈ ಹೇಳಿದ್ದಾರೆ. ಹತ್ರಾಸ್ ದುರಂತದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಆಯೋಗ ರಚಿಸಿದ್ದು, ಕಾಲ್ತುಳಿತದ ಹಿಂದೆ ಪಿತೂರಿ ಇರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ