ಅಸ್ಸಾಂ, ಅರುಣಾಚಲದಲ್ಲಿ ಪ್ರವಾಹ: ಸಂಕಷ್ಟದಲ್ಲಿ ಜನ
ಇಟಾಪಗರ,ಜು.೩-ದೇಶದ ಹಲವು ರಾಜ್ಯಗಳು ಪ್ರಸ್ತುತ ಪ್ರಕೃತಿಯ ಹೊಡೆತವನ್ನು ಎದುರಿಸುತ್ತಿವೆ. ಒಂದೆಡೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳು ಪ್ರವಾಹದಿಂದ ಕೆಂಗೆಟ್ಟಿವೆ.ಮತ್ತೊಂದೆಡೆ ಪೂರ್ವ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ, ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ನಗರಗಳು ಮತ್ತು ಹಳ್ಳಿಗಳು ನೀರಿನ ಪ್ರವಾಹದಲ್ಲಿ ಮುಳುಗುತ್ತಿರುವುದನ್ನು ಕಾಣಬಹುದು. ಪ್ರಳಯ ಹೇಗಿದೆಯೆಂದರೆ ಎಲ್ಲೆಲ್ಲೂ ವಿನಾಶದ ದೃಶ್ಯ ಮಾತ್ರ ಕಾಣುತ್ತಿದೆ.
ಜನರು ತಮ್ಮ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡುತ್ತಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹವಾಮಾನ ಇಲಾಖೆಯು ಜಿಲ್ಲಾವಾರು ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಬ್ರಹ್ಮಪುತ್ರ ಅಥವಾ ಅದರ ಉಪನದಿಗಳ ಸಮೀಪವಿರುವ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆಯು ಎಲ್ಲಾ ಈಶಾನ್ಯ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
೬ ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ ೧೨ ರಿಂದ ೧೯ ಕ್ಕೆ ಏರಿದೆ. ಇಲ್ಲಿಯವರೆಗೆ, ಸುಮಾರು ೬.೪೪ ಲಕ್ಷ ಜನರು ಪ್ರವಾಹ ಮತ್ತು ಹವಾಮಾನದಿಂದ ಸಂತ್ರಸ್ತರಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆಯಿಂದಾಗಿ ಜುಲೈ ೨ ರಿಂದ ಜುಲೈ ೬ ರವರೆಗೆ ಇಟಾನಗರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
ನಿರಂತರ ಮಳೆಯಿಂದಾಗಿ ನೀರಿನ ಮಟ್ಟ ಏರುತ್ತಿರುವ ಕಾರಣ, ಅರುಣಾಚಲ ಪ್ರದೇಶದ ಎಲ್ಲಾ ನದಿಗಳು ಪ್ರಸ್ತುತ ಅಪಾಯದ ಮಟ್ಟವನ್ನು ಮೀರಿವೆ. ವರದಿಯ ಪ್ರಕಾರ, ಪೂರ್ವ ಸಿಯಾಂಗ್ ಮತ್ತು ಲೋವರ್ ಸಿಯಾಂಗ್ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ಭಾರಿ ನಾಶವನ್ನು ಉಂಟುಮಾಡಿದೆ. ಇದುವರೆಗೆ ೩೫ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ೨೬,೧೯೯.೧೮ ಹೆಕ್ಟೇರ್ ಪ್ರದೇಶದ ಬೆಳೆ ನೀರಿನಿಂದ ನಾಶವಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಭೂಕುಸಿತ ಮತ್ತು ಪ್ರವಾಹದಿಂದಾಗಿ ಅರುಣಾಚಲ ಪ್ರದೇಶದಲ್ಲಿ ಮೇಲ್ಮೈ ಸಂಪರ್ಕದಲ್ಲಿ ಸಮಸ್ಯೆಗಳಿವೆ. ವರದಿಗಳ ಪ್ರಕಾರ, ಅಸ್ಸಾಂ ರೈಫಲ್ಸ್ ’ಆಪರೇಷನ್ ಸೇವಿಯರ್ ಅಡಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ೫೦೦ ಜನರನ್ನು ರಕ್ಷಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸೇನೆಯು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಮತ್ತು ರಾಜ್ಯದ ಪರಿಸ್ಥಿತಿಯನ್ನು ಎಲ್ಲಾ ಶಾಸಕರು ಮತ್ತು ಅಧಿಕಾರಿಗಳು ಗಮನಿಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ದೆಹಲಿ ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹರಿಯಾಣ, ಪಶ್ಚಿಮ ಯುಪಿ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಸಿಕ್ಕಿಂ, ಬಿಹಾರ ಮತ್ತು ಈಶಾನ್ಯ ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಐಎಂಡಿ ವಿಜ್ಞಾನಿ ಸೋಮ ಸೇನ್, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಗುಜರಾತ್ ಉಪ-ವಿಭಾಗಕ್ಕೆ ರೆಡ್ ಅಲರ್ಟ್ ಮತ್ತು ಕೊಂಕಣ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹೇಳಿದ್ದಾರೆ.